

ಬ್ರೆಜಿಲ್: ಊಟವಿಲ್ಲದೆ ನೀರು ಕುಡಿದು ಒಂದಷ್ಟು ದಿನಗಳು ಜೀವಿಸಬಹುದು. ಇದನ್ನೂ ಮೀರಿಯೂ ಒಂದು ಪ್ರಯತ್ನ ಮಾಡಿದ್ರೆ ಕೆಲವು ತಿಂಗಳು ಕಾಲ ಇರಬಹುದು. ಆಹಾರ ಇಲ್ಲದೆ ನೀರು ಕುಡಿದು ಬದುಕು ತಳ್ಳಬಹುದು. ಆದರೆ, ನೀರು ಕುಡಿಯದೇ ಇದ್ದರೆ ಜೀವಂತವಾಗಿರೋದು ಹೇಗೆ? ಎಂಬ ಪ್ರಶ್ನೆ ಅನೇಕರಲ್ಲಿ ಕಾಡುವುದು ನಿಜವೇ ಸರಿ. ಆದ್ರೆ, ವಿಚಿತ್ರ ಎಂಬಂತೆ ಇಲ್ಲೊಬ್ಬ ವ್ಯಕ್ತಿ ಕಳೆದ 50 ವರ್ಷಗಳಿಂದ ಒಂದು ಹನಿ ನೀರು ಸೇವಿಸದೆ, ಕೇವಲ ಕೋಕಾ-ಕೋಲಾ ಕುಡಿದು ಬದುಕಿದ್ದಾನೆ ಎಂದರೆ ನಂಬ್ತೀರಾ? ಕೇಳಲು ಕಷ್ಟ ಅನಿಸಿದರೂ ಇದು ಅಸಲಿ ಸಂಗತಿಯೇ!
ಮಾನವನ ಉಳಿವಿಗೆ ಕುಡಿಯುವ ನೀರು ಅತ್ಯಗತ್ಯ. ಆದರೆ ಈ ಮಾತನ್ನು ಸುಳ್ಳು ಮಾಡಿರುವುದು ಈ ವ್ಯಕ್ತಿ ಮಾತ್ರ ಎಂದೇ ಹೇಳಬಹುದು. ಕಳೆದ ಐವತ್ತು ವರ್ಷಗಳಿಂದ ಒಂದು ಹನಿ ನೀರು ಕುಡಿಯದಿದ್ದರೂ ಬದುಕಿರುವ ವ್ಯಕ್ತಿಯ ಬಗ್ಗೆ ಕೇಳಿದ್ರೆ, ಖಂಡಿತ ನೀವು ಅಚ್ಚರಿಗೊಳ್ತೀರಾ. ಬ್ರೆಜಿಲ್‌ನ ಬಹಿಯಾದಿಂದ ರಾಬರ್ಟ್ ಪೆಡ್ರೇರಾ ಎಂಬ ವ್ಯಕ್ತಿ ಕಳೆದ 50 ವರ್ಷಗಳಿಂದ ಕೇವಲ ಕೋಕಾ-ಕೋಲಾ ಕುಡಿಯುವುದರ ಮೂಲಕ ಜೀವಂತವಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ವರದಿಯ ಪ್ರಕಾರ, ನಿಸ್ಸಂದೇಹವಾಗಿ ಕೋಕ್‌ಗೆ ಬಿಗ್ ಫ್ಯಾನ್ ಆಗಿರುವ 70 ವರ್ಷದ ನಿವೃತ್ತಿ ಹೊಂದಿರುವ ರಾಬರ್ಟ್, ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಹ, ಅದನ್ನು ಲೆಕ್ಕಿಸದೆ ಕೋಕಾ-ಕೋಲಾವನ್ನೇ ಸೇವಿಸಲು ಬಯಸುತ್ತಾರೆ. ಇದಲ್ಲದೆ, ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೂ ಕೂಡ ಈ ಕುಡಿಯುವ ಪ್ರೇಮ ಮಾತ್ರ ಇವರಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ.
ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಇವರಿಗೆ ಮಾತ್ರೆ, ಔಷಧಿ ತೆಗೆದುಕೊಳ್ಳುವಂತೆ ಸಲಹೆ ಕೊಟ್ಟರೆ, ಇವರು ಮಾತ್ರ ಕೋಕ್ ಮೇಲಿನ ಉತ್ಸಾಹ ಬಿಡದೆ ವೈದ್ಯರಿಗೆ ಒಂದು ಮನವಿ ಇಟ್ಟಿದ್ದು, ನೀವು ಹೇಳಿದಂತೆ ಮಾತ್ರ ತೆಗೆದುಕೊಳ್ತೀನಿ. ಆದರೆ, ಒಂದು ಷರತ್ತು. ನೀರಿನಿಂದ ಅಲ್ಲ ಬದಲಿಗೆ ಕೋಕ್ ಕುಡಿಯುತ್ತ ಮಾತ್ರ ತಗೋತಿನಿ ಅಂತಾರೆ. ಇದು ವೈದ್ಯರಿಗೂ ತಲೆಬಿಸಿ ತಂದಿಡುವಂತ ಪರಿಸ್ಥಿತಿ.
ರಾಬರ್ಟ್ನ ಕೋಕ್ ಸೇವನೆಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಜನರು ತೀವ್ರ ಅಚ್ಚರಿಗೆ ಒಳಗಾಗಿದ್ದು, ಮೊದಲಿಗೆ ಇದನ್ನು ನಂಬದಿದ್ದರೂ ತದನಂತರ ಇರಬಹುದೇನೋ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ರಾಬರ್ಟ್ ಕಥೆಯು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಸುತ್ತುವರೆಯುತ್ತಿದ್ದಂತೆ ಅನೇಕರು ಇವರ ಬಗ್ಗೆ ತಿಳಿಯಲು ಭಾರೀ ಕುತೂಹಲ ವ್ಯಕ್ತಪಡಿಸುತ್ತಾರೆ,(ಏಜೆನ್ಸೀಸ್).