

ಬೆಂಗಳೂರು: ನಾಗಸಂದ್ರದಿಂದ ಮಾದಾವರವರೆಗಿನ ಗ್ರೀನ್ ಲೈನ್ ವಿಸ್ತರಣೆಗೆ ನಮ್ಮ ಮೆಟ್ರೋ ಆ. 6 ರಿಂದ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಲಿದೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಈ ಮಾರ್ಗವನ್ನು ಸಂಚಾರಕ್ಕೆ ತೆರೆಯಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
೨೯೮ ಕೋಟಿ ವೆಚ್ಚದಲ್ಲಿ ೩.೭ ಕಿಮೀ ಮಾರ್ಗವು ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಹಿಂದಿನ ಜಿಂದಾಲ್ ನಗರ) ಮತ್ತು ಮಾದಾವರ (ಬಿಐಇಸಿ)ದಲ್ಲಿ ನಿಲ್ದಾಣಗಳನ್ನು ಹೊಂದಿದೆ.
ಈಗಾಗಲೇ ನಾವು ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಒಂದು ತಿಂಗಳ ಕಾಲ ಪ್ರಾಯೋಗಿಕ ಓಡಾಟ ನಡೆಯಲಿದೆ. ನಾವು ಸೆಪ್ಟೆಂಬರ್ ಎರಡನೇ ವಾರದೊಳಗೆ ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರನ್ನು ತಪಾಸಣೆಗೆ ಆಹ್ವಾನಿಸಲು ಸಿದ್ಧತೆ ನಡೆಸುತ್ತಿದ್ದೇವೆ.
ಇದು ವಿಸ್ತರಣಾ ಮಾರ್ಗವಾಗಿರುವುದರಿಂದ ಮತ್ತು ಗ್ರೀನ್ ಲೈನ್‌ನಲ್ಲಿ ಚಲಿಸುವ ರೈಲುಗಳನ್ನು ಬಳಸಲಾಗುವುದು, ರೈಲುಗಳ ನಡುವಿನ ಹಾದಿಯು ಉದ್ದವಾಗಿರುತ್ತದೆ ಎಂದು ತಿಳಿಸಿದ್ದಾರೆ.
ನೆಲಮಂಗಲ, ಮಾಕಳಿ ಮತ್ತು ಮಾದನಾಯಕನಹಳ್ಳಿ ನಿವಾಸಿಗಳು ಮತ್ತು ತುಮಕೂರಿನಿಂದ ನಗರಕ್ಕೆ ಬರುವವರು ಮಾದಾವರದಲ್ಲಿ ಮೆಟ್ರೋ ಸೇವೆಯನ್ನು ಪಡೆಯಬಹುದು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡುವವರಿಗೂ ಇದು ನೆರವಾಗಲಿದೆ.
ಈ ಮಾರ್ಗದ ಕಾಮಗಾರಿ ಪೂರ್ಣಗೊಳಿಸಲು ಆಗಸ್ಟ್ ೨೦೧೯ಕ್ಕೆ ಗಡುವು ನೀಡಲಾಗಿತ್ತು. ಆದರೆ ಮಾದಾವರದ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲು ವಿಳಂಬ ಹಾಗೂ ನಾನಾ ಕಾರಣಗಳಿಂದ ಹಲವು ಬಾರಿ ವಿಸ್ತರಣೆ ಮಾಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.