VIDEO| ರಜಿನಿ, ಕಮಲ್​ರಿಂದ ಹಿಡಿದು ಬೇಬಿ ಶಾಲಿನಿ ಸೇರಿ 4 ನಿಮಿಷದಲ್ಲಿ 51 ಧ್ವನಿ ಮಿಮಿಕ್ರಿ ಮಾಡುವ ಕೇರಳ ಯುವತಿಗೆ ಎಲ್ರೂ ಫಿದಾ!

Akhila
Published on

ತಿರುವನಂತಪುರ: ಈ ಜಗತ್ತಿನಲ್ಲಿ ಕೆಲವರಿಗೆ ಮಾತ್ರ ದೇವರು ವಿಶೇಷವಾದ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ನೀಡಿರುತ್ತಾನೆ ಎಂಬುದಕ್ಕೆ ಉದಾಹರಣೆಯಾಗಿ ಈ ಕೇರಳದ ಯುವತಿ ನಿಂತಿದ್ದಾಳೆ. ಮಿಮಿಕ್ರಿ ಮಾಡುವವರನ್ನು ಸಾಕಷ್ಟು ಮಂದಿಯನ್ನು ನೋಡಿರುತ್ತೇವೆ. ಆದರೆ ಈ ಯುವತಿ ಅದರಲ್ಲೂ ವಿಶೇಷತೆ ಮೆರೆದಿದ್ದಾಳೆ. ಕೇವಲ 4 ಸೆಕೆಂಡ್​ನಲ್ಲಿ ಪುರುಷನಿಂದ ಮಹಿಳೆಗೆ ಹಾಗೂ ಮಹಿಳೆಯಿಂದ ಪುರುಷನಿಗೆ ಧ್ವನಿ ಬದಲಾಯಿಸಿ ಮಿಮಿಕ್ರಿ ಮಾಡುವ ಸಾಮರ್ಥ್ಯವನ್ನು ಈಕೆ ಹೊಂದಿದ್ದಾಳೆ.

ಮಿಮಿಕ್ರಿಯಲ್ಲಿ ಅತ್ಯದ್ಭುತ ಪ್ರತಿಭೆಯನ್ನು ಹೊಂದಿರುವ ಯುವತಿಯ ಹೆಸರು ಅಖಿಲಾ. ಈಕೆಯ ಸಾಮರ್ಥ್ಯವೇನೆಂದರೆ ಕೇವಲ 4 ನಿಮಿಷದಲ್ಲಿ ಬರೋಬ್ಬರಿ 51 ವ್ಯಕ್ತಿಯ ಧ್ವನಿಯನ್ನು ಅನುಕರಣೆ ಮಾಡುತ್ತಾಳೆ. ಅದರಲ್ಲಿ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಸೇರಿದ್ದಾರೆ.

ಅಖಿಲಾ ತಮ್ಮ ಸಾಮರ್ಥ್ಯವನ್ನು ಮಲಯಾಳಂನ ರಿಯಾಲಿಟಿ ಶೋ ಒಂದರಲ್ಲಿ ಪ್ರದರ್ಶಿಸಿದ್ದಾರೆ. ಇದೀಗ ಅವರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದೆ. ಈ ಮುಂಚೆಯೂ ಅಖಿಲಾ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ತಿರುವನಂತಪುರಂ ಜಿಲ್ಲೆಯ ನೆಡುಮಾಂಗಾಡ್​ ಮೂಲದ ನಿವಾಸಿಯಾಗಿರುವ ಅಖಿಲಾ, ಆಯುರ್ವೇದ ಮೆಡಿಸಿನ್​​ ವಿಷಯದಲ್ಲಿ ಅಂತಿಮ ವರ್ಷದ ಡಿಗ್ರಿ ಓದುತ್ತಿದ್ದಾರೆ ಶಾಲಾ ದಿನಗಳಿಂದಲೇ ಧ್ವನಿ ಅನುಕರಣೆ ಮಾಡುವುದನ್ನು ಆರಂಭಿಸಿದ ಅಖಿಲಾ ಅನೇಕ ಮಿಮಿಕ್ರಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಪ್ರಾರಂಭದಲ್ಲಿ ಪ್ರಾಣಿಗಳ ಧ್ವನಿಯನ್ನು ಅನುಕರಿಸಲು ಶುರುಮಾಡಿದೆ. ಬಳಿಕ ನಾನು ಮಾಡಿದ ಮೊದಲ ವ್ಯಕ್ತಿಯ ಅನುಕರಣೆ ಅಂದರೆ ಗಾಯಕಿ ಜಾನಕಿಯಮ್ಮ ಅವರದ್ದು. ಅವರು ಹಾಡಿದ ಹಾಡನ್ನು ಅವರಂತೆ ಹಾಡಲು ಕಲಿತೆ ಎಂದು ಅಖಿಲಾ ವಿವರಿಸಿದ್ದಾರೆ.

ಜಾನಕಿಯಮ್ಮ ಬಳಿಕ ಶಾಲಾ ಶಿಕ್ಷಕರ ಧ್ವನಿಯನ್ನು ಅನುಕರಿಸಿ ಶಾಲಾ ವಾರ್ಷಿಕೋತ್ಸವದಲ್ಲಿ ಮಿಮಿಕ್ರಿ ಮಾಡಿ ಮೆಚ್ಚುಗೆ ಪಡೆಯುತ್ತಿದ್ದೆ. ಇದು ಸ್ವಂತ ಕಲಿಕೆಯಾಗಿದೆ. ಇದಕ್ಕಾಗಿ ಸಾಕಷ್ಟು ಬಾರಿ ಟಿವಿಯನ್ನು ನೋಡುತ್ತಾ ಅಭ್ಯಾಸ ಮಾಡಿದ್ದೇನೆ ಎನ್ನುತ್ತಾರೆ ಅಖಿಲಾ.

ಸದ್ಯ 51 ಮಂದಿಯ ಧ್ವನಿಯನ್ನು ಅನುಕರಿಸುವ ಅಖಿಲಾ ನಟರಾದ ರಜಿನಿಕಾಂತ್​, ಕಮಲ್​ ಹಾಸನ್​ರಿಂದ ಹಿಡಿದು ಬೇಬಿ ಶಾಲಿನಿ ಸೇರಿದಂತೆ ರಾಜಕಾರಣಿಗಳ ಧ್ವನಿಯನ್ನು ಮಿಮಿಕ್ರಿ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net