ಬ್ರೇನ್ ಮ್ಯಾಪಿಂಗ್‌ನಿಂದ ಕಳ್ಳತನ ಬೆಳಕಿಗೆ

kenageri
Published on

ಬೆಂಗಳೂರು: ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದನ್ನು ಬ್ರೇನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಮನೆಗೆಲಸದಾಳು ಬಾಯ್ಬಿಟ್ಟು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.

ಕೋಡಿಪಾಳ್ಯ ನಿವಾಸಿ ಶಾರದಮ್ಮ ಬಂಧಿತೆ. ಆಕೆಯಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕೆಂಗೇರಿ ಪೊಲೀಸರು ಜಪ್ತಿ ಮಾಡಿದ್ದಾರೆ. ಕೋಡಿಪಾಳ್ಯ ವಿನಾಯಕ ಲೇಔಟ್‌ನ ರಿಯಲ್ ಎಸ್ಟೇಟ್ ಏಜೆಂಟ್ ಶಶಿಕಾಂತ್ ಮನೆಯಲ್ಲಿ ಶಾರದಮ್ಮ ಚಿನ್ನಾಭರಣ ಕಳವು ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿನಾಯಕ ಲೇಔಟ್‌ನಲ್ಲಿ ನೆಲೆಸಿದ್ದ ಶಶಿಕಾಂತ್‌ರ ಪತ್ನಿ ಚಂದ್ರಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುಶೂಷಕಿಯಾಗಿದ್ದಾರೆ. ಮೂರು ತಿಂಗಳಿಂದ ಅವರ ಮನೆಯಲ್ಲಿ ಶಾರದಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಮಾಲಿಕರಿಗೆ ತಿಳಿಯದಂತೆ ಒಂದೊಂದಾಗಿ ಆಭರಣವನ್ನು ಕಳವು ಮಾಡಿದ್ದರು. ಕೆಲ ದಿನಗಳ ಹಿಂದೆ ಶಶಿಕಾಂತ್ ಪತ್ನಿಗೆ ಆಭರಣ ನಾಪತ್ತೆಯಾಗಿರುವ ಸಂಗತಿ ಅರಿವಿಗೆ ಬಂದಿದೆ. ಈ ಬಗ್ಗೆ ಮನೆಯಲ್ಲಿ ಹುಡುಕಾಡಿದಾಗ ಪತ್ತೆಯಾಗಿಲ್ಲ. ಅನುಮಾನದ ಮೇಲೆ ಮನೆ ಕೆಲಸದಾಳು ಶಾರದಮ್ಮಳನ್ನು ಪ್ರಶ್ನಿಸಿದಾಗ ತನಗೇನು ತಿಳಿದಿಲ್ಲ ಎಂದಿದ್ದಾರೆ.

ಕೊನೆಗೆ ಕೆಂಗೇರಿ ಠಾಣೆಗೆ ಶಶಿಕಾಂತ್ ನೀಡಿದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಶಾರದಮ್ಮರನ್ನು ವಿಚಾರಣೆ ನಡೆಸಿದಾಗಲೂ ಆಕೆ ಬಾಯ್ಬಿಟ್ಟಿಲ್ಲ. ಕೊನೆಗೆ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಬ್ರೇನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಶಾರದಮ್ಮ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಭರಣಗಳು ಪತ್ತೆಯಾದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net