

ಶಿವಮೊಗ್ಗ: ಬಿ.ಆರ್.ಪ್ರಾಜೆಕ್ಟ್‌ನ ಪತ್ರ ಸಂಸ್ಕೃತಿ ಸಂಘಟನೆ ಆರಂಭವಾದ 25ನೇ ವರ್ಷದ ನೆನಪಿಗಾಗಿ ನ.23 ಹಾಗೂ 24ರಂದು ಬಿ.ಆರ್. ಪ್ರಾಜೆಕ್ಟ್ ಕೆಪಿಸಿ ರಂಗಮಂದಿರದಲ್ಲಿ ಬೆಳ್ಳಿಹಬ್ಬ ಆಚರಿಸಲಾಗುವುದು ಎಂದು ಸಂಘಟನೆಯ ಸಂಚಾಲಕ ಹೊಸಹಳ್ಳಿ ದಾಳೇಗೌಡ ಹೇಳಿದರು.
25 ವರ್ಷಗಳಿಂದ ನಮ್ಮ ಸಂಘಟನೆ ಪತ್ರ ಸಂಸ್ಕೃತಿ ಬೆಳೆಸುತ್ತಿದೆ. ಸಾಮಾಜಿಕ ಜಾಲತಾಣ, ದೂರವಾಣಿ, ಮೊಬೈಲ್ ಕಾರಣದಿಂದ ನಾವು ಭಾವನಾತ್ಮಕ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದೇವೆ. ಪತ್ರ ಬರೆಯುವ ಅಭ್ಯಾಸ ದೂರವಾಗಿದೆ. ಗ್ರಾಮಾಂತರ ಪ್ರದೇಶದ ಅಂಚೆ ಕಚೇರಿಗಳಲ್ಲಿ ಪತ್ರಗಳೇ ಇರುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
24 ವರ್ಷಗಳಿಂದ ರಾಜ್ಯದ ಎಲ್ಲೆಡೆ ಪತ್ರ ಮಿತ್ರರನ್ನು ಕಲೆಹಾಕಿ ಪತ್ರ ಮೈತ್ರಿ ಸಮ್ಮಿಲನ ಏರ್ಪಡಿಸಿ ಕನ್ನಡ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಾರಿಯೂ ಇಂತಹ ಸಮ್ಮಿಲನ ಕಾರ್ಯಕ್ರಮ ನಡೆಸಲಾಗುವುದು. ಎರಡು ದಿನಗಳ ಕಾರ್ಯಕ್ರಮದಲ್ಲಿ ಉಪನ್ಯಾಸ, ಕವಿಗೋಷ್ಠಿ, ಹರಟೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.
ಬೆಳ್ಳಿ ಹಬ್ಬದ ಅಂಗವಾಗಿ ಜಿಲ್ಲಾ ಮಟ್ಟದ ಅಂಚೆ ಕಾರ್ಡ್ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ. ಬಾಂಧವ್ಯಕ್ಕೆ ಸಂಬಂಧಿಸಿ ಅಂಚೆ ಕಾರ್ಡ್‌ನಲ್ಲಿ ಅನಿಸಿಕೆಗಳನ್ನು ಬರೆಯಬಹುದು. ಇದಕ್ಕೆ ಯಾವುದೇ ವಯೋಮಿತಿ ಇಲ್ಲ. ನ.16ರೊಳಗೆ ಹೊಸಹಳ್ಳಿ ದಾಳೇಗೌಡ, ನಂ.4, ಚೌಡಮ್ಮ ಕ್ಯಾಂಪ್, ಸಿಂಗನಮನೆ, ಬಿ.ಆರ್.ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ. ಪಿನ್- 577115 ಈ ವಿಳಾಸಕ್ಕೆ ಕಾರ್ಡ್ ತಲುಪಬೇಕು. ಅತ್ಯುತ್ತಮವಾಗಿ ಬರೆದ 10 ಜನರಿಗೆ 250 ರೂ. ಬಹುಮಾನ ನೀಡಲಾಗುವುದು.
ಪತ್ರ ಸಂಸ್ಕೃತಿ ಸಂಘಟನೆಯು ಪಿಸು ಮಾತು ಎಂಬ ಪತ್ರ ಸಂಸ್ಕೃತಿ ಮಿತ್ರರ ತ್ರೈಮಾಸಿಕ ಪತ್ರಿಕೆಯನ್ನು 15 ವರ್ಷಗಳಿಂದ ಪ್ರಕಟಿಸುತ್ತಿದೆ. ದೇಶ ವಿದೇಶಗಳ ಸುಮಾರು 1,500 ಪತ್ರ-ಮಿತ್ರ ಗೆಳೆಯರು ಸಂಘಟನೆಯಲ್ಲಿದ್ದಾರೆ ಎಂದರು.
ಪ್ರಮುಖರಾದ ಕಾಂತೇಶ್ ಕದರಮಂಡಲಗಿ, ಮಹೇಶ್, ಉಮಾ ದಾಳೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.