ಯುವಕನನ್ನು ಕೊಂದ ಸ್ನೇಹಿತರು

Crime Logo
Published on

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ರಕ್ತದೋಕುಳಿ ನಡೆದಿದ್ದು, ಸ್ನೇಹಿತರೇ ಯುವಕನನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಶ್ರೀನಿವಾಸನಗರ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ಶ್ರೀನಿವಾಸನಗರ ನಿವಾಸಿ ವಿಜಯ್ ಕುಮಾರ್(೨೧) ಕೊಲೆಯಾದವ. ಕೃತ್ಯ ಎಸಗಿದ ಆತನ ಸ್ನೇಹಿತರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ ವಿಜಯ್ ಕುಮಾರ್, ಡಿ.೩೧ರ ರಾತ್ರಿ ಹೊಸ ವರ್ಷದ ಆಚರಣೆಗೆ ಸ್ನೇಹಿತರ ಜತೆ ಹೋಗಿದ್ದಾನೆ. ಬಳಿಕ ಎಲ್ಲರೂ ಒಟ್ಟಿಗೆ ಮದ್ಯ ಸೇವಿಸಿ ಮನೆಗೆ ಆಟೋದಲ್ಲಿ ಹೋಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಆರೋಪಿಗಳು ಹಾಗೂ ವಿಜಯ್ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ ಶ್ರೀನಿವಾಸನಗರ ಬಸ್ ನಿಲ್ದಾಣದ ಬಳಿ ವಿಜಯ್ ಕುಮಾರ್‌ನನ್ನು ಇಳಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಸ್ ನಿಲ್ದಾಣದ ಮುಂಭಾಗ ಮೃತದೇಹ ಎಸೆದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪೊಲೀಸರು ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net