

Patna: ಬಿಹಾರ ವಿಧಾನಸಭಾ ಚುನಾವಣೆಗೂ (Bihar Election) ಮುನ್ನ ಮಹಾಘಟಬಂಧನ್ನೊಳಗಿನ ಆಂತರಿಕ ಭಿನ್ನಾಭಿಪ್ರಾಯವನ್ನು ಪರಿಹರಿಸುವ ಕೊನೆಯ ಪ್ರಯತ್ನವಾಗಿ ಪಾಟ್ನಾ ತಲುಪಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಿರಿಯ ನಾಯಕರುಗಳನ್ನು ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಚರ್ಚೆ ನಡೆಸಿದ ಗೆಹ್ಲೋಟ್, ಆರ್ಜೆಡಿ, ಕಾಂಗ್ರೆಸ್ ಮತ್ತು ಇತರ ಮಿತ್ರಪಕ್ಷಗಳು ಎದುರಿಸುತ್ತಿರುವ ಮೈತ್ರಿಕೂಟದಲ್ಲಿನ ಸಂಘರ್ಷವನ್ನು ಶಮನಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಪಾಟ್ನಾದಲ್ಲಿ ಮಾತನಾಡಿದ ಗೆಹ್ಲೋಟ್, ಬಿಹಾರದಲ್ಲಿ 243 ಸ್ಥಾನಗಳಿವೆ, 5-10 ಸ್ಥಾನಗಳಲ್ಲಿ (Friendly Fight) ಸ್ನೇಹಪರ ಹೋರಾಟಗಳು ನಡೆಯಬಹುದು, ಆದರೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುವ ಮೂಲಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದರು.
ತೇಜಸ್ವಿ ಯಾದವ್ ಅವರೊಂದಿಗಿನ ಭೇಟಿಯು ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ತಂತ್ರವಾಗಿದ್ದು, ಜಂಟಿ ಚುನಾವಣಾ ಪ್ರಚಾರದಲ್ಲಿ ಬಿರುಕು ಸ್ಪಷ್ಟವಾಗಿದ್ದು, ಸಾಮಾನ್ಯ ಪ್ರಣಾಳಿಕೆಯ ಕುರಿತಾದ ಮಾತುಕತೆಗಳು ಸ್ಥಗಿತಗೊಂಡಿವೆ. ಆರ್ಜೆಡಿ ಮತ್ತು ಕಾಂಗ್ರೆಸ್ ಎರಡೂ ಒಂದೇ ರೀತಿಯ ಭರವಸೆಗಳನ್ನು ನೀಡಿವೆ, ಆದರೆ ಏಕೀಕೃತ ಸ್ವರೂಪವನ್ನು ಇನ್ನೂ ಒಪ್ಪಿಕೊಳ್ಳಲಾಗಿಲ್ಲ.
ಮೈತ್ರಿಕೂಟದ ಉದ್ವಿಗ್ನತೆಯ ನಡುವೆಯೆ, ಆರ್ಜೆಡಿ ಮಹಿಳಾ ಮತದಾರರನ್ನು ಸೆಳೆಯಲು ಪ್ರಮುಖ ತಂತ್ರ ಹೆಣೆದಿದ್ದು, ತೇಜಸ್ವಿ ಯಾದವ್ ಜೀವಿಕಾ ದೀದಿ ಸಮುದಾಯದವರಿಗೆ ಶಾಶ್ವತ ಉದ್ಯೋಗಗಳನ್ನು ಘೋಷಿಸಿದ್ದಾರೆ. ಒಟ್ಟು 1.5 ಕೋಟಿ ಜೀವಿಕಾ ದೀದಿಗಳಲ್ಲಿ ಸುಮಾರು 1.5 ಲಕ್ಷ ಸದಸ್ಯರಿಗೆ ಮಾಸಿಕ 30,000 ರೂ.ಗಳ ವೇತನವನ್ನು ನೀಡುವುದಾಗಿ ಘೋಷಿಸಿದರು. ಮಹಿಳೆಯರಿಗೆ ನೀಡಲಾಗುವ ಸಾಲಗಳನ್ನು ಮನ್ನಾ ಮಾಡಲಾಗುವುದು, ಎರಡು ವರ್ಷಗಳವರೆಗೆ ಬಡ್ಡಿರಹಿತ ಸಾಲಗಳನ್ನು ನೀಡಲಾಗುವುದು ಮತ್ತು 5 ಲಕ್ಷ ರೂ.ಗಳವರೆಗೆ ವಿಮಾ ರಕ್ಷಣೆಯನ್ನು ನೀಡಲಾಗುವುದು. ಆರ್ಜೆಡಿ ಅಧಿಕಾರಕ್ಕೆ ಬಂದರೆ ಗುತ್ತಿಗೆ ಕಾರ್ಮಿಕರ ಉದ್ಯೋಗಗಳನ್ನು ಖಾಯಂ ಮಾಡುವುದಾಗಿಯೂ ಅವರು ಭರವಸೆ ನೀಡಿದರು. ಈ ಘೋಷಣೆಯನ್ನು ಜೆಡಿಯು ನಾಯಕ ಸಂಜಯ್ ಝಾ ಟೀಕಿಸಿದ್ದು, ನಾವು ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಮತ್ತು ನಮ್ಮ ಅಭ್ಯರ್ಥಿಗಳು ಸ್ಥಿರರಾಗಿದ್ದಾರೆ, ಈಗ ಅವರು ಇನ್ನೂ ತಮ್ಮ ತಮ್ಮಲ್ಲಿಯೇ ಜಗಳವಾಡುತ್ತಿದ್ದಾರೆ. ಎನ್ಡಿಎ ಸರ್ಕಾರವು ವಿವಿಧ ಭರವಸೆಗಳನ್ನು ಈಡೇರಿಸಿದೆ, ಆದರೆ, ವಿಪಕ್ಷ ನಾಯಕರು ಏನನ್ನೂ ಮಾಡದೆ, ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ, ಜನರಿಗೆ ಇದು ತಿಳಿದಿದೆ ಎಂದು ಹೇಳಿದರು.
ಇದೇ ವಿಷಯವಾಗಿ ಮಾತನಾಡಿರುವ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಮಹಾಘಟಬಂಧನ್ ನಾಯಕರು ಅಸಂಬದ್ಧವಾಗಿ ಮಾತನಾಡುತ್ತಾರೆ. 2.7 ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದರು, ಆದರೆ ಅವರ ಕುಟುಂಬವು ಬಿಹಾರವನ್ನು 15 ವರ್ಷಗಳ ಕಾಲ ಆಳಿತು ಮತ್ತು 1 ಲಕ್ಷ ಉದ್ಯೋಗಗಳನ್ನು ಸಹ ನೀಡಲಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ಕನಸುಗಳನ್ನು ಸೃಷ್ಠಿಸುವವರು, ಚುನಾವಣೆಯ ಬಳಿಕ ಎಲ್ಲವನ್ನೂ ಮರೆತುಬಿಡುತ್ತಾರೆ. ಇವರೆಲ್ಲಾ ಬಿಹಾರವನ್ನು ಹಾಳುಮಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಟೀಕಿಸಿದರು.
ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಅಕ್ಟೋಬರ್ 17 ರಂದು ಕೊನೆಗೊಂಡಿದ್ದರೆ, ಎರಡನೇ ಹಂತದ ಮತದಾನದ ಕೊನೆಯ ದಿನಾಂಕ ಸೋಮವಾರ ಕೊನೆಗೊಂಡಿತು. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್)