ಸಖ್ಯ, ಆತ್ಮನಿವೇದನ

namste
Published on

ಭಗವಂತನು ತನ್ನ ಸಖ, ಸ್ನೇಹಿತ ಎಂಬ ಭಾವದಿಂದ ಆರಾಧಿಸಿ, ಅವನ ಇಚ್ಛೆಗನುಸಾರವಾಗಿ ನಡೆದುಕೊಳ್ಳುವುದು. ಅನನ್ಯ ಪ್ರೀತಿ-ಪ್ರೇಮಗಳಿಂದ ಅವನ ಸೇವೆ ಮಾಡುವುದು ನವವಿಧ ಭಕ್ತಿಯಲ್ಲಿ ಎಂಟನೇಯದಾದ ಸಖ್ಯ ಭಕ್ತಿ. ಕೃಷ್ಣ-ಕುಚೇಲರ ಸಖ್ಯವೇ ಇದಕ್ಕೆ ಉತ್ತಮ ನಿದರ್ಶನ. ದೇವರೇ ನನ್ನ ನಿಜವಾದ ಬಂಧು, ಮಿತ್ರ. ಇತರರು ಬರೀ ಬಂದು ಹೋಗುತ್ತಾರೆ.

ಆ ಪರಮಮಿತ್ರನ ಜೊತೆ ಸಂಭಾಷಣೆ, ಅವನ ಸ್ಪರ್ಶ, ಸಂದರ್ಶನಕ್ಕಾಗಿ ಕಾತರಗೊಳ್ಳುತ್ತಾ, ಆ ಮಿತ್ರನ ವಿಯೋಗದಲ್ಲಿ ವ್ಯಾಕುಲಗೊಳ್ಳುತ್ತಾ, ಹಗಲೂ ಇರುಳೂ ಅವನ ಪ್ರತೀಕ್ಷೆಯಲ್ಲೇ ಇರುತ್ತಾನೆ ಸಖ್ಯ ಭಕ್ತ. ತ್ಯಾಗರಾಜರು ಅವರ ಕೀರ್ತನೆಗಳಲ್ಲಿ, ಶ್ರೀರಾಮನನ್ನು ವರಮಿತ್ರ, ತ್ಯಾಗರಾಜಸಖುಡು ಎಂದು ಸಂಬೋಧಿಸುತ್ತಾ ಅವನೊಡನೆ ಅತ್ಯಂತ ಸ್ನೇಹದಿಂದ, ನನ್ನನ್ನು ರಕ್ಷಿಸಿ ನಿನ್ನ ಕುಲಬಿರುದುಗಳನ್ನು ಉಳಿಸಿಕೋ ಎಂದು ಸಲುಗೆಯಿಂದ ರೇಗಿಸುತ್ತಾರೆ, ಹಾಸ್ಯ ಮಾಡುತ್ತಾರೆ.

ಆತ್ಮನಿವೇದನಂ ಭಕ್ತಿ : ಒಂಬತ್ತನೆಯದೇ ಆತ್ಮನಿವೇದನಂ ಭಕ್ತಿ. ನಾನು ಎಂಬುದನ್ನು ತೊರೆದು, ತನ್ನ ಸರ್ವಸ್ವವನ್ನು ಭಗವಂತನಿಗೆ ಸಮರ್ಪಿಸುವುದನ್ನು ಆತ್ಮನಿವೇದನೆ ಎಂದು ಕರೆಯುತ್ತಾರೆ. ಸುಖ-ದುಃಖ, ಲಾಭ-ನಷ್ಟ, ನೋವು-ನಲಿವು ಎಲ್ಲವೂ ಭಗವಂತನ ಪ್ರಸಾದ ಎಂಬ ಭಾವದಲ್ಲಿ ಭಕ್ತನು ಜೀವನದಲ್ಲಿ ಬರುವ ದ್ವಂದ್ವಗಳನ್ನು ಸ್ವೀಕರಿಸುತ್ತಾನೆ.

ಎಲ್ಲವೂ ಭಗವಂತನ ಇಚ್ಛೆ, ತನ್ನದು ಏನೂ ಇಲ್ಲ ಎನ್ನುತ್ತಾನೆ ಆತ್ಮನಿವೇದನೆ ಮಾಡಿಕೊಂಡ ಭಕ್ತ. ತನು ನಿನ್ನದು ಜೀವನ ನಿನ್ನದು/ಅನುದಿನದಲ್ಲಿ ಬರುವ ಸುಖ-ದುಃಖ ನಿನ್ನದಯ್ಯಾ/ ಸವಿನುಡಿ ವೇದ ಪುರಾಣ ಶಾಸ್ತಂಗಳ ಕಿವಿಯಿಂದ ಕೇಳುವ ಕಥೆ ನಿನ್ನದು - ಎಂಬ ದಾಸ ಸಾಹಿತ್ಯ ಆತ್ಮನಿವೇದನ ಭಕ್ತಿ ಭಾವಕ್ಕೆ ಉತ್ತಮ ನಿದರ್ಶನ. ಹೀಗೆ ನಮಗೆ ಇಷ್ಟವಾಗುವ, ಸರಿಹೊಂದುವ ಭಕ್ತಿ ಭಾವದಲ್ಲಿ ಭಗವಂತನ ಜೊತೆ ಸಂಬಂಧವನ್ನು ಬೆಳಸಿಕೊಂಡು, ಅವನನ್ನು ಪೂಜಿಸಿ, ಅರ್ಚಿಸಿ, ಪರಮಪದವನ್ನು ಅಥವಾ ಅವನನ್ನು ಪಡೆಯುವುದೇ ಭಕ್ತಿಯ ಗುರಿ. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಹೇಳುವಂತೆ, ಕಲಿಯುಗದಲ್ಲಿ ಜನರಿಗೆ ನಾರದೀಯ ಭಕ್ತಿಯು ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net