

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಸಾಮೂಹಿಕ ನಾಯಕತ್ವದಿಂದ ಮಾತ್ರ ಅಧಿಕಾರಕ್ಕೇರಲು ಸಾಧ್ಯ ಎಂಬುದನ್ನು ನಂಬಿಕೊಂಡಿರುವ ಕಾಂಗ್ರೆಸ್ನಲ್ಲೀಗ ಅಗ್ರ ನಾಯಕರ ನಡುವೆ ‘ಮುಂದಿನ ಸಿಎಂ’ ಹುದ್ದೆಗೆ ಪೈಪೋಟಿ ಹೆಚ್ಚಾಗಿರುವುದು ಹೈಕಮಾಂಡ್ಗೆ ‘ಉಭಯ’ ಸಂಕಟ ತಂದಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಅಭಿಪ್ರಾಯ ಗಟ್ಟಿಗೊಳಿಸುವ ಪ್ರಯತ್ನ ನಡೆದಿದೆ. ಜತೆಗೆ ಪಕ್ಷದ ಅಧ್ಯಕ್ಷರಿಗಿಂತ ಸಿದ್ದರಾಮಯ್ಯ ಕೇಂದ್ರಿತಗೊಳಿಸುವ ಮತ್ತು ಅವರೇ ಬಲಿಷ್ಠವೆಂದು ಬಿಂಬಿಸುವ ಉದ್ದೇಶ ಪಕ್ಷದ ಇತರ ನಾಯಕರ ಕಣ್ಣನ್ನು ಕೆಂಪಾಗಿಸಿದೆ.
ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ 22-23 ತಿಂಗಳಿರುವಾಗ ಏನೇ ಗುರಿ ಅಥವಾ ವೈಮನಸ್ಯ ಇದ್ದರೂ ಒಗ್ಗಟ್ಟು ಪ್ರದರ್ಶಿಸುವ ಬದಲು ಏಕನಾಯಕತ್ವದತ್ತ ಹೊರಳುವುದು ಅಪಾಯಕಾರಿ ಎಂದು ಭಾವನೆ ಪ್ರಮುಖ ನಾಯಕರಿಗೆ ಮನವರಿಕೆ ಆಗಿದೆ. ಆದರೆ, ಸಿದ್ದರಾಮಯ್ಯ ಪರಮಾಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪದೇಪದೆ ಮುಂದಿನ ಸಿಎಂ ವಿಷಯ ಎತ್ತುತ್ತಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆಮ್ಮದಿ ಗೆಡಿಸಿದೆ. ಇದೇ ಕಾರಣಕ್ಕೆ ಅವರು ‘ಹದ್ದುಬಸ್ತಿನ’ ಮಾತನಾಡಿದ್ದಾರೆ. ಜತೆಗೆ ಕಲೆಕ್ಟಿವ್ ಲೀಡರ್ ಶಿಪ್ ಬಗ್ಗೆ ಸೂಚ್ಯವಾಗಿ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.
‘ಎಲ್ಲರೂ ಹದ್ದುಬಸ್ತಿನಲ್ಲಿ ಇರಬೇಕು. ಸಿದ್ದರಾಮ ಯ್ಯಗೂ ಅಭಿಮಾನ ಇರುತ್ತೆ, ಅಭಿಮಾನಿಗಳು ಇರುತ್ತಾರೆ. ನಾನು, ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಪರಮೇಶ್ವರ್ ಇರಬಹುದು, ಎಲ್ಲರಿಗೂ ಆಸೆ, ಆಕಾಂಕ್ಷೆಗಳು ಇರುತ್ತದೆ’ ಎಂದು ಡಿಕೆಶಿ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆ ಸಾಲುಗಳ ನಡುವೆ ಸಾಕಷ್ಟು ಗೂಡಾರ್ಥಗಳು ಅಡಗಿವೆ. ಇಷ್ಟು ದಿನಗಳವರೆಗೂ ಸುಮ್ಮನಿದ್ದ ಡಿಕೆಶಿ, ಏಕಾಏಕಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ್ ಹೆಸರು ಎಳೆದು ತಂದಿರುವುದರ ಹಿಂದೆ ವಿಶೇಷ ಅರ್ಥವೂ ಕಾಣಿಸಿದೆ. ಈ ಮಾತು ಯಾರಿಗೆಷ್ಟು ಅರ್ಥವಾಗಿರುತ್ತದೋ ಇಲ್ಲವೋ ಗೊತ್ತಿಲ್ಲ, ಸಿದ್ದರಾಮಯ್ಯ ಮತ್ತು ಅವರ ಬಣಕ್ಕೆ ಅರ್ಥ ಮಾಡಿಸುವುದು ಡಿಕೆಶಿ ಉದ್ದೇಶ ಎಂಬುದಂತೂ ಸತ್ಯ. ಪಕ್ಷ ಕಟ್ಟಲು ಖರ್ಗೆ ಹಾಗೂ ಪರಮೇಶ್ವರ್ ಶ್ರಮವಿದೆ. ಅವರ ಹಿಂದೆ ಜಾತಿಯ ಬಲವಿದೆ. ನಾಯಕತ್ವ ಗುಣವೂ ಇದೆ. ಅವರೂ ಅರ್ಹರು ಎಂದು ತಿಳಿಹೇಳಿದಂತೆ ಕಾಣಿಸಿದೆ.
ನೋಟಿಸ್: ಡಿಕೆಶಿ ಹದ್ದುಬಸ್ತಿನ ಮಾತುಗಳ ಹೊರತಾಗಿಯೂ ಜಮೀರ್ ಸೋಮವಾರವೂ ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಹೇಳಿಕೆ ಮುಂದುವರಿಸಿದ್ದಾರೆ. ಸದ್ಯ ಜನ ಅದನ್ನೇ ಬಯಸಿದ್ದಾರೆ. ಹಾಗಾಗಿ ಹೇಳುತ್ತಿದ್ದೇನೆ. ಒಂದು ವೇಳೆ ಜನ ಶಿವಕುಮಾರ್ ಸಿಎಂ ಆಗಲಿ ಎಂದು ಬಯಸಿದರೆ ಆಗ ನೋಡೋಣ ಎಂದೂ ಮಾತಿನಲ್ಲೇ ಟಾಂಗ್ ಕೊಟ್ಟಿದ್ದಾರೆ. ಇನ್ನೊಂದೆಡೆ ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಸಹ ಸಿದ್ದರಾಮಯ್ಯ ಪರ ಧ್ವನಿ ಎತ್ತಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೋಮವಾರ ಭಾವಿ ಸಿಎಂ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡದಂತೆ ಜಮೀರ್ ಮತ್ತು ಹಿಟ್ನಾಳ್ಗೆ ನೋಟಿಸ್ ನೀಡಿ ಡ್ಯಾಮೇಜ್ ಕಂಟ್ರೋಲ್ಗೆ ಯತ್ನಿಸಿದ್ದಾರೆ.
ನನ್ನನ್ನೂ ಸೇರಿ ಯಾರ ಬಗ್ಗೆಯೂ ಇಂಥವರೇ ನಾಯಕರಾಗಬೇಕು ಎಂದು ಯಾರೂ ಹೇಳುವುದು ಬೇಡ. ವ್ಯಕ್ತಿ ಪೂಜೆ ನಮ್ಮ ಆದ್ಯತೆಯಲ್ಲ. ಆಂತರಿಕ ಗುಂಪುಗಾರಿಕೆ ನಡೆಯುತ್ತಿಲ್ಲ. ಹೀಗಾಗಿ ನಾಯಕತ್ವದ ಹೇಳಿಕೆಗೆ ಮಹತ್ವ ಬೇಕಿಲ್ಲ.
| ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕೆಲ ಶಾಸಕರು ಹೇಳುತ್ತಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಮೊದಲು ಚುನಾವಣೆ ನಡೆದು ಪಕ್ಷಕ್ಕೆ ಬಹುಮತ ಬರಬೇಕು. ನಂತರ ಶಾಸಕರ ಅಭಿಪ್ರಾಯ ಪಡೆದು ಸಿಎಂ ಯಾರಾಗಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ.
| ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ
ನಾನು ಸಿಎಂ ಆಗಬೇಕೆಂಬ ಆಸೆ ನನ್ನ ಅಭಿಮಾನಿಗಳಿಗೂ ಇದೆ, ಎಲ್ಲ ಮುಖಂಡರು, ಅಭಿಮಾನಿಗಳಿಗೂ ಅವರ ನಾಯಕ ಸಿಎಂ ಆಗಬೇಕೆಂಬ ಆಸೆ ಇರುವುದು ಸಹಜ, ಇದಕ್ಕೂ ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ಸಿಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಎಂದು ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ, ಜಮೀರ್ ವಿರುದ್ಧ ಕ್ರಮಕೈಗೊಳ್ಳುವಂತಹದ್ದು ಏನೂ ಆಗಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಯಾವುದೇ ಬಣಕ್ಕೂ ಅವಕಾಶವಿಲ್ಲ. ಜಮೀರ್ ಪಕ್ಷದ ಅಧ್ಯಕ್ಷರ ಸೂಚನೆ ಪಾಲಿಸಬೇಕು.
| ಡಾ. ಜಿ. ಪರಮೇಶ್ವರ್ ಶಾಸಕ, ಮಾಜಿ ಸಚಿವ (ತುಮಕೂರಿನಲ್ಲಿ)
ಸಿದ್ದರಾಮಯ್ಯ ಮುಖ್ಯಂತ್ರಿ ಆಗಬೇಕೆಂಬುದು ಜನರ ಅಭಿಪ್ರಾಯ. ಅದನ್ನೇ ನಾನು ಹೇಳಿದ್ದೇನೆ. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಏಕೆ ಅಸಮಾಧಾನವಾಗುತ್ತದೆ. ರಾಜ್ಯದ ಜನ ಡಿಕೆಶಿ ಸಿಎಂ ಆಗಬೇಕೆಂದು ಬಯಸಬೇಕಲ್ಲವೇ?
| ಜಮೀರ್ ಅಹಮದ್ ಖಾನ್ ಶಾಸಕ
ರಾಜ್ಯ ಕಾಂಗ್ರೆಸ್ ಡಿಕೆಶಿ ಅವರಂಥ ದುರ್ಬಲ ರಾಜ್ಯಾಧ್ಯಕ್ಷರನ್ನು ಕಂಡಿರುವ ಸಾಧ್ಯತೆ ಕಡಿಮೆ. ಕೆಪಿಸಿಸಿ ಅಧ್ಯಕ್ಷರಿಂದಲೂ ಜಮೀರ್ ಅಹ್ಮದ್ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಮೇಲುಗೈ ಸಾಧಿಸುತ್ತಿದ್ದಾರೆ. ವಲಸಿಗರ ಮುಂದೆ ಮೂಲ ಕಾಂಗ್ರೆಸ್ಸಿಗರು ಮಂಡಿಯೂರಿ ಬಿಟ್ಟಿದ್ದಾರೆ.
| ಕರ್ನಾಟಕ ಬಿಜೆಪಿ