

ಫ್ರಾನ್ಸ್ ದೇಶ ಸದ್ಯ ದೊಡ್ಡದೊಂದು ಸಮಸ್ಯೆಯನ್ನು ಎದುರಿಸುತ್ತಿದೆ. ಅದಕ್ಕಾಗಿ ಅದು ಅಭಿಯಾನ ಆರಂಭಿಸಿದ್ದು, ಒಂದು ಕಾಲ್ ಸೆಂಟರ್ ಮತ್ತು ವೆಬ್‌ಸೈಟ್ ಕೂಡ ತೆರೆದಿದೆ!
ಅಭಿಯಾನವು ಮನೆಗಳಲ್ಲಿನ ಪೀಠೋಪಕರಣ ಕಾಪಾಡುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಟ್‌ಲೈನ್ ಸಂಖ್ಯೆ ಕರೆ ಮಾಡಿ ತಿಳಿಯಬಹುದು. ಅಲ್ಲದೆ, ವೆಬ್ಸೈಟ್ನಲ್ಲೂ ಆ ಬಗ್ಗೆ ಮಾಹಿತಿ ನೀಡಲಾಗಿದೆ.
"ನಾವೆಲ್ಲರೂ ಇದರ ಪರಿಣಾಮ ಎದುರಿಸಲೇಬೇಕು. ಇಂತಹ ಪರಾವಲಂಬಿ ಜೀವಿಗಳು ನಮ್ಮ ಹತ್ತಿರ ಸುಳಿಯದಂತೆ ಎಚ್ಚರ ವಹಿಸಬೇಕು" ಎಂದು ವೆಬ್ಸೈಟ್ನಲ್ಲಿ ಸೂಚಿಸಲಾಗಿದೆ. ಅದರಲ್ಲೂ ನಮ್ಮ ಸೋಫಾ ಸೆಟ್ಗಳು ಮತ್ತು ಹಾಸಿಗೆಗಳ ಮೇಲೆ ನಿಗಾ ವಹಿಸಬೇಕು ಎಂದಿದೆ.
ಅಷ್ಟಕ್ಕೂ ಇಡೀ ದೇಶಕ್ಕೆ ಬಂದಿರುವ ತೊಂದರೆ ಕೊರೊನಾ ವೈರಸ್ನಂತಹ ಮಾರಕ ರೋಗ ಅಲ್ಲವಾದರೂ ಇದರ ಕಾಟ ಮಾತ್ರ ತಡೆಯಲಾಗಲ್ಲ. ಫ್ರಾನ್ಸ್ ತೊಂದರೆಗೀಡಾಗಿರುವುದು ತಿಗಣೆಗಳಿಂದ! ಅದು ಎಷ್ಟರಮಟ್ಟಿಗೆ ಎಂದರೆ ಸರ್ಕಾರವೇ ಇದರ ವಿರುದ್ಧ ಆಂದೋಲನ ಆರಂಭಿಸುವಷ್ಟು.
ಅದಕ್ಕಾಗಿ ಆರಂಭಿಸಿರುವ ವೆಬ್ಸೈಟ್ನಲ್ಲಿ "ತಿಗಣೆಗಳು ಒಂದು ರಾತ್ರಿಗೆ ಕಡಿಮೆ ಎಂದರೂ 90 ಬಾರಿ ಕಚ್ಚುತ್ತವೆ. ಅದರಿಂದ ದೇಹದ ಮೇಲೆ ಕೆಂಪನೆಯ ಕಲೆಗಳಾಗುತ್ತವೆ. ಇದು ನೋಡುವುದಕ್ಕೆ ಥೇಟ್ ಸೊಳ್ಳೆ ಕಚ್ಚಿದ ಕಲೆಗಳಂತೆ ಇರುತ್ತವೆ" ಎಂದೆಲ್ಲ ಮಾಹಿತಿ ನೀಡಲಾಗಿದೆ. ಇಂತಹ ತಿಗಣೆ ಕಡಿತದಿಂದ ತಪ್ಪಿಸಿಕೊಳ್ಳುವುದ ಅಸಾಧ್ಯ ಎಂದು ಎಚ್ಚರಿಸಲಾಗಿದೆ.
ಹೀಗೆ ಫ್ರಾನ್ಸ್ನ್ನು ಕಾಡುತ್ತಿರುವ ತಿಗಣೆ ಸಮಸ್ಯೆ ಬಂದಿರುವುದು ಪ್ರವಾಸಿಗಳಿಂದ ಎನ್ನುವುದು ಅಲ್ಲಿ ಸರ್ಕಾರದ ಅಭಿಪ್ರಾಯ. ವಿದೇಶಿ ಪ್ರವಾಸಿಗರು ಮೂಲಕ ಬಂದ ತಿಗಣೆಗಳು ಫ್ರಾನ್ಸ್ನಲ್ಲೇ ಠಿಕಾಣಿ ಹೂಡಿವೆ.
ಅದಕ್ಕೆ ಸರ್ಕಾರ ಅಲ್ಲಿನ ನಾಗರಿಕರಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದೆ. ನೀವು ನಿಮ್ಮ ಬಟ್ಟೆಗಳನ್ನು 60 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ಬಿಸಿಯಾದ ನೀರಿನಿಂದ ತೊಳೆದು ನಂತರ ಧರಿಸಿ ಎನ್ನುವುದು ಪ್ರಮುಖವಾದದ್ದು.
ಫ್ರಾನ್ಸ್ಗೆ ಈ ತೆರನಾದ ತಿಗಣೆ ಸಮಸ್ಯೆ ಬಂದಿರುವುದು ಇದೇ ಮೊದಲೇನಲ್ಲ. 1950ರಲ್ಲಿ ತಿಗಣೆ ಕಾಟ ಆರಂಭವಾಗಿ ಜನ ಜೀವನ ಮತ್ತು ನಿದ್ರೆಯನ್ನು ಹಾಳು ಮಾಡಿತ್ತು ಎನ್ನುತ್ತದೆ ಫ್ರಾನ್ಸ್ ದೇಶದ ಇತಿಹಾಸ. (ಏಜೆನ್ಸೀಸ್)