

ಬೆಂಗಳೂರು : ಸುಳ್ಳು ಸುದ್ದಿ, ಪಕ್ಷಪಾತದ ಸುದ್ದಿ, ಕಾಸಿಗಾಗಿ ಸುದ್ದಿ, ಸೆನ್ಸೇಷನಲ್ ಸುದ್ದಿಗಳು ಪ್ರಜಾಪ್ರಭುತ್ವಕ್ಕೆ ಮಾರಕ(Sensational news is dangerous for democracy) ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ(veerappa moily) ಕಳವಳ ವ್ಯಕ್ತಪಡಿಸಿದರು.
ವಾರ್ತಾಸೌಧದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ‘ಬದಲಾಗುತ್ತಿರುವ ಪತ್ರಿಕಾ ಮಾಧ್ಯಮದ ಸ್ವರೂಪ’ ವಿಷಯದ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಗ್ರಹಿಸುತ್ತಿವೆ. ಪತ್ರಕರ್ತರ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದರು.
ಪತ್ರಿಕಾ ಮಾಧ್ಯಮ ನಿತ್ಯ ಸವಾಲು ಎದುರಿಸುತ್ತಿರುವ ಕ್ಷೇತ್ರ. ಇದು ನಿಂತ ನೀರಲ್ಲ. ಜಗತ್ತಿನ ಬದಲಾವಣೆಗೆ ಪೂರಕವಾಗಿ ಮಾಧ್ಯಮಗಳೂ ಬದಲಾಗುತ್ತಿವೆ. ಸಮಾಜವನ್ನು ಮುನ್ನಡೆಸುವ ಮಾಡುವ ಮಾಧ್ಯಮಗಳು ನಿಷ್ಪಕ್ಷಪಾತತೆ ಕಾಯ್ದುಕೊಳ್ಳಬೇಕು ಎಂದು ಹೇಳಿದರು. ಪ್ರಜಾಪ್ರಭುತ್ವ ಬದುಕಬೇಕಾದರೆ ಮಾಧ್ಯಮ ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಬದಲಾಗುತ್ತಿರುವ ಸಮಾಜದ ಸವಾಲಿಗೆ ಅನುಗುಣವಾಗಿ ಮಾಧ್ಯಮಗಳು ಬದಲಾಗಬೇಕು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಪತ್ರಿಕೆಗಳು ದೊಡ್ಡ ಸವಾಲು ಎದುರಿಸಿದವು. ಈಗಲೂ ಅಂತಹ ಸಂಕೀರ್ಣ ಸ್ಥಿತಿ ಮತ್ತೆ ಮಾಧ್ಯಮ ಕ್ಷೇತ್ರಕ್ಕೆ ಬಂದಿದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಿದಾಗ ಪ್ರಜಾಪ್ರಭುತ್ವದ ಮೌಲ್ಯಗಳು ಸಾಕಾರವಾಗುತ್ತವೆ. ಅನೇಕ ಸವಾಲುಗಳ ಮಧ್ಯವೂ ಮಾಧ್ಯಮದ ಅದರಲ್ಲೂ ವಿಶೇಷವಾಗಿ ಮುದ್ರಣ ಮಾಧ್ಯಮದ ಭವಿಷ್ಯ ಆಶಾದಾಯಕವಾಗಿದೆ ಎಂದರು.
ಈ ದೇಶದಲ್ಲಿ ಮಾಧ್ಯಮಗಳು ನಿಜವಾದ ಒಂಬುಡ್‌ಸ್ಮನ್‌ಗಳು. ಪತ್ರಿಕೆಗಳು ಸತ್ಯದ ಹಾದಿ ಹಿಡಿಯಬೇಕು. ಪುನರ್ ಚಿಂತನೆ ಮಾಡಿಕೊಂಡು ಸರಿಯಾದ ದಾರಿ ಹುಡುಕೊಕೊಳ್ಳಬೇಕು ಎಂದು ಮೊಯಿಲಿ ತಿಳಿಸಿದರು.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎ.ನಾರಾಯಣ ಮಾತನಾಡಿ, ಪತ್ರಿಕೆ ಸರ್ಕಾರದ ಜಾಹೀರಾತು ಅವಲಂಬನೆ ಒಳ್ಳೆಯ ಬೆಳವಣಿಗೆ ಅಲ್ಲ. ಅನೇಕ ವಿಧದ ಜಾಹೀರಾತುಗಳು ಮುದ್ರಣ ಮಾಧ್ಯಮ ಬಿಟ್ಟು ಹೋಗಿವೆ. ಇಂದು ಪತ್ರಿಕೆಗಳಲ್ಲಿ ರಾಜಕೀಯ ಜಾಹೀರಾತು ಢಾಳಾಗಿ ಕಾಣಿಸುತ್ತಿವೆ. ಓದುಗರು, ಜಾಹೀರಾತುದಾರರಿಗೆ ಬೇಡವಾದ ಪತ್ರಿಕೆಗಳು ರಾಜಕಾರಣಿಗಳು, ಸರ್ಕಾರಕ್ಕೆ ಎಷ್ಟು ಕಾಲ ಬೇಕಾಗಬಹುದು? ಎಂಬುದನ್ನು ಚಿಂತಿಸಬೇಕು. ರಾಜಕೀಯ ರಂಗಕ್ಕೆ ಪತ್ರಿಕಾ ಮಾಧ್ಯಮ ಬೇಡ ಎನಿಸಿದರೆ ಪತ್ರಿಕೆ ಮೂಲಕ ಜನರನ್ನು ತಲುಪಬೇಕಿಲ್ಲ ಎಂಬ ಭಾವನೆ ಬರುತ್ತಿದೆ. ನಿಮ್ಮ ಅಗತ್ಯ ಬೇಕಿಲ್ಲ ಎಂದು ಪರೋಕ್ಷವಾಗಿ ಹೇಳಿದಂತೆ ಎಂದರು.
ಪತ್ರಿಕೆ ಅಗತ್ಯ ಪೂರೈಸುವ ಮಾಧ್ಯಮ ಇಂದಿಗೂ ಮತ್ತೊಂದಿಲ್ಲ. ಸಾಮಾನ್ಯ ಪ್ರಜೆಗೆ ಮುದ್ರಣ ಮಾಧ್ಯಮದ ಅಗತ್ಯವಿದೆ. ಎಲೆಕ್ಟ್ರಾನಿಕ್, ಸೋಸಿಯಲ್ ಮೀಡಿಯಾ ಇದ್ದರೂ ಪತ್ರಿಕೆಯಲ್ಲಿ ಒಂದು ವಿಚಾರ ಹೈಲೈಟ್ ಆದರೆ ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಸೋಸಿಯಲ್ ಮೀಡಿಯಾ ಮೂಲಕ ಸಮಸ್ಯೆ ಹೈಲೈಟ್ ಮಾಡಲು ಹೋದರೆ ಅದನ್ನು ನಿರಾಕರಿಸುವ ಸಾಧ್ಯತೆಗಳು ಸಾಕಷ್ಟಿವೆ. ಈ ಅಗತ್ಯವನ್ನು ಪತ್ರಿಕೆ ಪೂರೈಸಿದಷ್ಟು ಬೇರೆ ಮಾಧ್ಯಮ ಪೂರೈಸಲು ಸಾಧ್ಯವೇ ಇಲ್ಲ. ಪತ್ರಿಕೆಗೆ ಪರ್ಯಾಯ ಇಲ್ಲ ಎಂದು ಹೇಳಿದರು.
ಪತ್ರಿಕೆಗಳು ಕಳೆದುಕೊಂಡ ವಿಶ್ವಾಸಾರ್ಹತೆ ಮರಳಿ ತರುವ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸುವ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮಾತನಾಡಿ, ಮಾಧ್ಯಮಗಳು ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಈ ಗುಣದ ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಇಂದು ಸಮಾಜದಲ್ಲಿ ಹೆಚ್ಚಾಗುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕಾಗಿದೆ. ಪತ್ರಿಕೆಗಳು ಸಮಾಜದ ಸಾಕ್ಷಿ ಪ್ರಜ್ಞೆಯಿಂದ್ದಂತೆ ಎಂದರು.
ಮಾಧ್ಯಮ ಕ್ಷೇತ್ರದಲ್ಲಿ ಬೆಳವಣಿಗೆಯಾದ ಹಾಗೆ ಜನರ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಜನರು ತಾವು ನೋಡುವ, ಕೇಳುವ, ಬಳಸುವ ಹಾಗೂ ಹಂಚಿಕೊಳ್ಳುವ ಸುದ್ದಿಗಳ ಸತ್ಯಾಸತ್ಯತೆ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅತಿ ಅಗತ್ಯ. ಜನರು ಸುದ್ದಿಯ ಮೂಲವನ್ನು ಖಾತರಿ ಪಡಿಸುವ ಮೂಲಕ ತಪ್ಪು ಮಾಹಿತಿ, ಸುಳ್ಳು ಸುದ್ದಿಗಳು ಹರಡುವುದನ್ನು ನಿಯಂತ್ರಿಸಬಹುದು ಎಂದು ಆಯೇಶಾ ಖಾನಂ ಹೇಳಿದರು.Freedom of the press ಸತ್ಯ ಸುದ್ದಿಗೆ ಆದ್ಯತೆ ನೀಡಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಮಾತನಾಡಿ, ಇಂದಿನ ದಿನಗಳಲ್ಲಿ ಊಹಾ ಪತ್ರಿಕೋದ್ಯಮವೇ ಹೆಚ್ಚಾಗಿದೆ. ಸತ್ಯ ಸ್ವರೂಪದ ಸುದ್ದಿ ಪ್ರಕಟಣೆ ಕಡಿಮೆಯಾಗುತ್ತಿದೆ. ಪತ್ರಿಕೋದ್ಯಮಿಗಳು ವಸ್ತುಸ್ಥಿತಿಯನ್ನು ಅರಿತು ಸುದ್ದಿಗಳನ್ನು ಪ್ರಕಟಿಸುವ ಕೆಲಸ ಮಾಡಬೇಕು. ಸುಳ್ಳು ಸುದ್ದಿಗಳನ್ನು ಪ್ರಕಟಿಸದೆ ಸತ್ಯವಾದ ಸುದ್ದಿಗಳನ್ನು ಪ್ರಕಟಿಸುವುದರ ಮೂಲಕ ಸಮಾಜದಲ್ಲಿ ಬದಲಾವಣೆ ತರುವಂತ ಕೆಲಸ ಮಾಡಬೇಕು. ಇಂದಿನ ದಿನಗಳಲ್ಲಿ ಪತ್ರಿಕೋದ್ಯಮಿಗಳು ಪ್ರಸಾರ ಸಂಖ್ಯೆಗೆ ಅನುಗುಣವಾಗಿ ಜಾಹೀರಾತುಗಳನ್ನು ಪಡೆಯಲು ಹವಣಿಸುತ್ತಿದ್ದಾರೆ. ಜಾಹೀರಾತುಗಳನ್ನು ಪಡೆಯುವುದೇ ಮುಖ್ಯವಲ್ಲ. ವಸ್ತುನಿಷ್ಟವಾದ ಸುದ್ದಿಗಳನ್ನು ಪ್ರಕಟಿಸುವುದೇ ಮಾಧ್ಯಮದ ಗುರಿಯಾಗಬೇಕು. ಬ್ರೇಕಿಂಗ್ ಸುದ್ದಿಗಳನ್ನು ನೀಡುವ ಬದಲಾಗಿ ನೈಜವಾದ ಸುದ್ದಿಗಳನ್ನು ನೀಡಿದರೆ ಅದು ಬದಲಾವಣೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಎಂ.ಸಹನ, ಮಾಧ್ಯಮ ಅಕಾಡೆಮಿಯ ಸದಸ್ಯರು, ವಿವಿಧ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.