ಸ್ವಾತಂತ್ರ್ಯ ಬಂತು ಸೌಜನ್ಯ ಹೋಯ್ತು

1-67912880a9c2f
Published on
ಕವಿ ಸಿದ್ಧಯ್ಯ ಪುರಾಣಿಕರು ‘ಸ್ವಾತಂತ್ರ್ಯ ಬಂತು ಸೌಜನ್ಯ ಹೋಯ್ತು’ ಎನ್ನುತ್ತಾರೆ. ಸೌಜನ್ಯವೆಂದರೆ ಒಳ್ಳೆಯತನ ಹಾಗೂ ಉದಾರತ್ವ ಎಂಬುದಾಗಿದೆ. ನಮಗೆ ಸ್ವಾತಂತ್ರ್ಯ ಸಿಕ್ಕಾಗ ನಮ್ಮಲ್ಲಿರುವ ಉದಾರತ್ವ ಹಾಗೂ ಒಳ್ಳೆಯ ತನ ಹೋಗಬಾರದು. ಪ್ರಕೃತಿಯ ಅಗಾಧತೆಯನ್ನು ಗಮನಿಸಿದಾಗ ನಮಗೆ ನಮ್ಮ ಅಲ್ಪತನದ ಅರಿವಾಗುತ್ತದೆ.

ಸ್ವಾಮೀ ಚಿನ್ಮ ಯಾನಂದರು, ‘ದೇವರು ನೀಡುತ್ತಾನೆ ಹಾಗೂ ಕ್ಷಮಿಸುತ್ತಾನೆ. ಮನುಷ್ಯನು ಪಡೆಯುತ್ತಾನೆ ಹಾಗೂ ಮರೆಯುತ್ತಾನೆ’ ಎನ್ನುತ್ತಾರೆ. ನಮ್ಮ ಅಂಗಳವನ್ನು ನಾವು ಸ್ವಚ್ಛ ಮಾಡಲು ಸಾಕಷ್ಟು ನೀರುಬೇಕು, ಶ್ರಮವಹಿಸಬೇಕು. ಪ್ರಕೃತಿಯು ಕೇವಲ ಮಳೆಸುರಿಸುವು ದರ ಮುಖಾಂತರ ಅಂಗಳವನ್ನು, ಗಿಡಮರಗಳನ್ನು, ಜೀವರಾಶಿಯನ್ನು ಶುದ್ಧಮಾಡುತ್ತದೆ. ಪ್ರಕೃತಿಯ ಸೌಜನ್ಯದ ಮುಂದೆ ನಮ್ಮತನವು ಅಲ್ಪವಾಗುತ್ತದೆ. ಸ್ವಾತಂತ್ರ್ಯವನ್ನು ನಾವು ತಪ್ಪುತಿಳಿದ ಕಾರಣದಿಂದಾಗಿ ನಮ್ಮಲ್ಲಿ ಸೌಜನ್ಯವು ಹೊರಟುಹೋಗುತ್ತದೆ. ತಂದೆ ಗಿಂತ ಹೆಚ್ಚು ಹಣವನ್ನು ಮಗನು ಸಂಪಾದಿಸಿದಾಗ ಸಹಜವಾಗಿ ಮಗನಲ್ಲಿದ್ದ ಸೌಜನ್ಯವು ದೂರವಾಗುತ್ತದೆ. ಅಹಂಕಾರವು ಸೌಜನ್ಯವನ್ನು ನಾಶಮಾಡುತ್ತದೆ.

ಡಿ.ವಿ.ಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೀಗೆಂದಿದ್ದಾರೆ: ತಂದೆ ಮಕ್ಕಳಿಗೆ ಹದಗೆಟ್ಟುದನು ಕಾಣೆಯಾ?| ಹೊಂದಿರುವರವರ್ ಅಹಂತೆಯು ಮೊಳಿಯುವನಕ| ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ?| ಬಂಧ ಮುರಿವುದು ಬಳಿಕ - ಮಂಕುತಿಮ್ಮ||

ತಂದೆ ಹಾಗೂ ಮಕ್ಕಳಲ್ಲಿ ಪ್ರೀತಿಯ ಹದವು ಅಹಂಕಾರವು ಹುಟ್ಟುವವರೆಗೆ ಚೆಂದದಲ್ಲಿರುತ್ತದೆ. ಅಹಂಕಾರದ ಮೊಳಕೆಯು ಸುಳಿದಾಗ ತಂದೆ ಮಕ್ಕಳಲ್ಲಿದ್ದ ಬಂಧವು ಮುರಿಯುತ್ತದೆ. ನಾನು ಸ್ವತಂತ್ರನೆಂಬ ತಪ್ಪು ಕಲ್ಪನೆಯೇ ಈ ಬಂಧಮುರಿಯಲು ಕಾರಣ ವಾಗಿದೆ. ಈ ಪ್ರಪಂಚದ ಎಲ್ಲಾ ಜೀವ ಸಮೂಹವು ಸಂಗಜೀವಿಗಳು. ನಾವು ಇತರ ಜೀವಿಗಳೊಡನೆ, ಪ್ರಕೃತಿಯೊಡನೆ ಸಾಮರಸ್ಯದಿಂದ ಬದುಕಬೇಕು. ಇಲ್ಲಿ ಸಾಮರಸ್ಯವನ್ನು ಹಾಳು ಮಾಡಿಕೊಂಡರೆ ನಾವೇ ದುಃಖಿಗಳಾಗುತ್ತೇವೆ. ಸಂಸ್ಕೃತದಲ್ಲಿ ಒಬ್ಬ ಸುಭಾಷಿತಕಾರ ‘ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಂ ಉದಾರಚರಿತಾನಾಂ ತು ವಸುಧೈವ ಕುಟುಂಬಕಂ’ ಎಂದಿದ್ದಾನೆ. ಇದು ನನ್ನದು ಅದು ಅವನದು ಎಂದು ಅಲ್ಪ ಬುದ್ಧಿಯ ಜನರು ಲೆಕ್ಕಹಾಕುತ್ತಾರೆ. ಉದಾರ ಹೃದಯರಿಗೆ ಇಡೀ ಪ್ರಪಂಚವೇ ಒಂದು ಕುಟುಂಬವೆಂಬ ಅರಿವಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net