ಪ್ರತಿ ಮನೆಗೂ ಉಚಿತ ನೀರು: ಮಾಸಿಕ 10000 ಲೀ. ಮಿತಿ; ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯ ಯೋಜನೆ

Front
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಂದು ಕುಟುಂಬಕ್ಕೂ ಸಿಹಿ ಸುದ್ದಿ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿನ ಪ್ರತಿಯೊಂದು ಕುಟುಂಬಕ್ಕೂ ಮಾಸಿಕ ಹತ್ತು ಸಾವಿರ ಲೀಟರ್ ಕುಡಿಯುವ ನೀರನ್ನು ಉಚಿತವಾಗಿ ಕೊಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.

ಹೊಸ ವರ್ಷ ಜನವರಿಗೆ ಹೊಸ ಕೊಡುಗೆ ನೀಡಲು ಉದ್ದೇಶಿಸಿದ್ದು, ಮುಂದಿನ ಚುನಾವಣೆಯನ್ನು ಗಮನದಲ್ಲಿ ಟ್ಟುಕೊಂಡು ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ‘ಜಲ ಜೀವನ್ ಮಿಷನ್’ನ ಹರ್​ಘರ್ ಜಲ್ ಯೋಜನೆ ಜಾರಿಗೆ ಬರುತ್ತಿದೆ. ಅಂದಾಜು 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಯೋಜನೆಗಳು ಭರದಿಂದ ನಡೆದಿವೆ. ಇದೇ ಯೋಜನೆಯಲ್ಲಿ ಉಚಿತ ನೀರು ಪೂರೈಕೆ ಯೋಜನೆ ಜಾರಿಗೆ ತಂದರೆ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಏನೂ ಬರುವುದಿಲ್ಲವೆಂಬುದು ಸರ್ಕಾರದ ಲೆಕ್ಕಾಚಾರ. ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಇದೇ ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಲಿ ಜನಪ್ರಿಯ ಕಾರ್ಯಕ್ರಮವಾಗಿದ್ದು, ಪಕ್ಷದ ಪರವಾಗಿ ಜನರ ಅಭಿಪ್ರಾಯ ಮೂಡಿಸಿದೆ. ಆದ್ದರಿಂದಲೇ ರಾಜ್ಯದಲ್ಲಿಯೂ ಚುನಾವಣೆಗೆ ಹೋಗುವ ಮುನ್ನ ಇಂಥದ್ದೊಂದು ಯೋಜನೆಯನ್ನು ತರುವುದು ಒಟ್ಟಾರೆ ಆಶಯವಾಗಿದೆ.

ಕರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಲ ಹೆಚ್ಚು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಾಲ್ಕು ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ದಿ ಮಾಡಿಕೊಳ್ಳುವುದು ಒಂದಾಗಿತ್ತು. ಆ ಸಂದರ್ಭದಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳು ತೆರಿಗೆ ದರ ಹೆಚ್ಚಿಸಿದ್ದವು. ಅದರಲ್ಲಿ ನೀರಿನ ದರವೂ ಸೇರಿತ್ತು. ಆದರೆ, ಸಂಗ್ರಹ ಕಡಿಮೆಯಾಗುವುದರ ಜತೆಗೆ ದೂರುಗಳು ಹೆಚ್ಚಾಗಿದ್ದವು.

ನಗರಾಭಿವೃದ್ದಿ ಇಲಾಖೆ ಯೋಜನೆ: ಸ್ಥಳೀಯ ಸಂಸ್ಥೆಗಳಲ್ಲಿ ದೂರುಗಳು ಹೆಚ್ಚಾಗಿ ಕೇಳಿಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ಮುಂದಿನ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಿದ್ದಾರೆ. ಯೋಜನೆಯನ್ನು ಮೊದಲಿಗೆ ಪ್ರಕಟಿಸಿ ಮುಂದಿನ ಬಜೆಟ್​ನಲ್ಲಿ ಅನುದಾನ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ನೀರಿನ ದರ ಹಾಗೂ ನಲ್ಲಿ ಸಂಪರ್ಕಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ. ಜಲ ಜೀವನ ಮಿಷನ್ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ. ಪ್ರತಿ ಕುಟುಂಬಕ್ಕೂ ಮಾಸಿಕ ಹತ್ತು ಸಾವಿರ ಲೀಟರ್ ನೀರು ಉಚಿತವಾಗಿ ಸರಬರಾಜು ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚೆ ನಡೆಸಿ ಪ್ರಸ್ತಾವನೆ ಸಲ್ಲಿಸಲಾಗುವುದು. | ಬಿ.ಎ. ಬಸವರಾಜ ನಗರಾಭಿವೃದ್ದಿ ಸಚಿವ

ಎಷ್ಟು ವೆಚ್ಚ?: ಬೆಂಗಳೂರು ಹೊರತುಪಡಿಸಿದರೆ ಉಳಿದ ನಗರ ಮತ್ತು ಗ್ರಾಮೀಣ ಭಾಗಕ್ಕೆ ವಾರ್ಷಿಕ ಅಂದಾಜು 250 ಕೋಟಿ ರೂ.ಗಳಷ್ಟು ಮಾತ್ರ ವೆಚ್ಚ ಆಗಬಹುದೆಂದು ಅಂದಾಜು ಮಾಡಲಾಗಿದೆ. ಹತ್ತು ಸಾವಿರ ಲೀಟರ್​ಗಿಂತ ಹೆಚ್ಚು ಬಳಕೆ ಮಾಡುವವರಿಗೆ ಸ್ಲ್ಯಾಬ್ ರೀತಿಯಲ್ಲಿ ಶುಲ್ಕ ವಿಧಿಸುವುದು. ಅದರಲ್ಲಿ ಮೊದಲ ಐದು ಸಾವಿರ ಲೀಟರ್​ಗೆ ಒಂದು ಮೊತ್ತವಿದ್ದರೆ, ಐದು ಸಾವಿರ ಲೀಟರ್ ಮೀರಿದ ನಂತರ ಹೆಚ್ಚಿನ ಶುಲ್ಕ ವಿಧಿಸುವ ಮೂಲಕ ಸರ್ಕಾರ ವೆಚ್ಚ ಮಾಡುವ ಮೊತ್ತದ ಬಹುಭಾಗ ವಾಪಾಸು ಬರುತ್ತದೆ ಎಂಬ ಅಂದಾಜು ಇದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 10 ಸಾವಿರ ಲೀಟರ್​ಗಿಂತ ಹೆಚ್ಚಿನ ಪ್ರಮಾಣದ ನೀರು ಬಳಕೆದಾರರು ದೊಡ್ಡ ಪ್ರಮಾಣದಲ್ಲಿದ್ದಾರೆ ಎನ್ನಲಾಗಿದೆ.

ಎಷ್ಟು ಮನೆಗಳು?: ರಾಜ್ಯದ ಜನಸಂಖ್ಯೆ 7 ಕೋಟಿ ಇದೆ. ಪ್ರತಿಮನೆಗೆ ಅಂದಾಜು 4 ಜನರಂತೆ ಲೆಕ್ಕ ಹಾಕಿದರೆ 1.40 ಕೋಟಿ ಮನೆಗಳಾಗಬಹುದೆಂದು ಅಂದಾಜು ಮಾಡಲಾಗಿದೆ.

ಮೀಟರ್ ಕಡ್ಡಾಯ: ಜಲ ಜೀವನ್ ಮಿಷನ್ ಯೋಜನೆಯಲ್ಲಿ ಪ್ರತಿ ನಲ್ಲಿಯ ಸಂಪರ್ಕಕ್ಕೂ ಮೀಟರ್ ಕಡ್ಡಾಯವಾಗಿದೆ. ಆದರೆ, ಚುನಾವಣೆ ಹತ್ತಿರ ಇರುವ ಈ ಸಂದರ್ಭದಲ್ಲಿ ಮೀಟರ್ ಅಳವಡಿಸಲು ಮುಂದಾದರೆ ವ್ಯಾಪಕ ವಿರೋಧ ಕೇಳಿ ಬರುತ್ತದೆ. ಮೀಟರ್ ಅಳವಡಿಸಿದರೂ ಸಹ ಹತ್ತು ಸಾವಿರ ಲೀಟರ್ ತನಕ ಉಚಿತ ನೀರು ಕೊಟ್ಟರೆ ವಿರೋಧ ಬರುವುದಿಲ್ಲವೆಂಬುದು ಲೆಕ್ಕಾಚಾರ. ಗ್ರಾಮೀಣ ಪ್ರದೇಶದಲ್ಲಿ ಈಗ ಮೀಟರ್ ಅಳವಡಿಸಿಲ್ಲ. ಆದ್ದರಿಂದ ನೀರಿನಿಂದ ಗ್ರಾಮ ಪಂಚಾಯಿತಿಗಳಿಗೆ ಯಾವ ಆದಾಯವೂ ಬರುತ್ತಿಲ್ಲ. ಬೆಂಗಳೂರು ಹಾಗೂ ಕೆಲವು ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾತ್ರ ನೀರಿನ ಕರ ಸಂಗ್ರಹವಾಗುತ್ತಿದೆ. ಉಳಿದ ಪಟ್ಟಣಗಳಲ್ಲಿ ನೀರಿನಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುತ್ತಿಲ್ಲ.

ಎಷ್ಟು ಬರುತ್ತಿದೆ ಆದಾಯ?: ಬೆಂಗಳೂರು ನಗರದಲ್ಲಿ ಮಾತ್ರ ಜಲಮಂಡಳಿಗೆ ಪ್ರತಿ ತಿಂಗಳು 110 ಕೋಟಿ ರೂ.ಗಳಷ್ಟು ಶುಲ್ಕ ಸಂಗ್ರಹವಾಗುತ್ತಿದೆ. ಸೋರಿಕೆ ಹಾಗೂ ಕಳ್ಳತನ ತಡೆಗಟ್ಟಲು ಸಾಧ್ಯವಾಗಿಲ್ಲ. ಉಳಿದ ನಗರ ಪ್ರದೇಶದಲ್ಲಿ ವಾರ್ಷಿಕ 200 ಕೋಟಿ ರೂ.ಗಳಷ್ಟು ಸಂಗ್ರಹವಾಗುತ್ತಿಲ್ಲವೆಂದು ಅಂದಾಜು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net