ಎಸ್ಸಿ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಶಿಕ್ಷಣ!; ಸಮಾಜ ಕಲ್ಯಾಣ ಇಲಾಖೆಗೆ ಶುಲ್ಕ ಭರಿಸುವ ಹೊಣೆ

shiva
Published on

| ಎನ್.ಎಲ್.ಶಿವಮಾದು ಬೆಂಗಳೂರು

ಪರಿಶಿಷ್ಟ ಜಾತಿ (ಎಸ್​ಸಿ) ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಕಲಿಕೆ ಉತ್ತೇಜಿಸುವುದಕ್ಕಾಗಿ ವೈದ್ಯಕೀಯ, ಇಂಜಿನಿಯರಿಂಗ್, ಬಿ.ಇಡಿ ಸೇರಿ ವಿವಿಧ ವೃತ್ತಿಪರ ಶಿಕ್ಷಣದ ಶುಲ್ಕವನ್ನು ಸರ್ಕಾರದ ವತಿಯಿಂದಲೇ ಭರಿಸಿ ಉಚಿತ ಶಿಕ್ಷಣ ನೀಡುವ ತೀರ್ಮಾನ ಹೊರಬಿದ್ದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಥವಾ ಕಾಮೆಡ್-ಕೆ ಸೇರಿ ಇತರ ಕೇಂದ್ರೀಕೃತ ಪ್ರಾಧಿಕಾರಗಳ ಮೂಲಕ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಸಂಬಂಧಪಟ್ಟ ಕೋರ್ಸ್​ಗಳಿಗೆ ವಿಶ್ವವಿದ್ಯಾಲಯ/ಇಲಾಖೆ ಹೊರಡಿಸಲಾಗುವ ಆದೇಶದಲ್ಲಿ ನಿಗದಿಯಾದ ಶುಲ್ಕ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಲಾಗುವ ಅಧಿಸೂಚನೆಯ ಕಾಲೇಜುವಾರು ನಿಗದಿಪಡಿಸಿದ ಶುಲ್ಕದಲ್ಲಿ ಯಾವುದು ಕಡಿಮೆಯೋ ಆ ಶುಲ್ಕವನ್ನು ಮಂಜೂರು ಮಾಡಲಾಗುತ್ತದೆ. ಖಾಸಗಿ/ಡೀಮ್್ಡ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳ ಎಸ್​ಸಿ ವಿದ್ಯಾರ್ಥಿಗಳಿಗೆ ಖಾಸಗಿ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಿಗೆ ಸರ್ಕಾರವು ನಿಗದಿಪಡಿಸಿದ ಶುಲ್ಕವನ್ನು ಭರಿಸಲಾಗುತ್ತದೆ.

ಏಕೆ ಈ ನಿರ್ಧಾರ?

ಮೆಟ್ರಿಕ್ ನಂತರದ ಕೋರ್ಸ್ ಓದುತ್ತಿರುವ ಹಾಗೂ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ. ಈ ಕಾರ್ಯಕ್ರಮದಡಿ ಮಂಜೂರು ಮಾಡಲಾಗುತ್ತಿರುವ ಶುಲ್ಕಗಳಲ್ಲಿ ಕಡ್ಡಾಯ ಶುಲ್ಕಗಳಾದ ಬೋಧನಾ ಶುಲ್ಕ, ಪ್ರವೇಶ/ನೋಂದಣಿ ಶುಲ್ಕ, ಪರೀಕ್ಷಾ ಶುಲ್ಕ, ಕ್ರೀಡಾ ಶುಲ್ಕ, ಗ್ರಂಥಾಲಯ ಶುಲ್ಕ, ಪ್ರಯೋಗಾಲಯ ಶುಲ್ಕ, ವೈದ್ಯಕೀಯ ಪರೀಕ್ಷಾ ಶುಲ್ಕ ಮರುಪಾವತಿಗೆ ಪರಿಗಣಿಸಲಾಗುತ್ತಿದೆ. ಆದರೆ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮಾರ್ಗಸೂಚಿಯಂತೆ ಆಡಳಿತ ಮಂಡಳಿ ಕೋಟಾ (ಮ್ಯಾನೇಜ್​ವೆುಂಟ್) ಅಡಿ ದಾಖಲಾದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಶುಲ್ಕ ಮರುಪಾವತಿಗೆ ಅರ್ಹತೆ ಹೊಂದಿರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದರ ಜತೆಗೆ, ಕಾಲೇಜುಗಳಲ್ಲಿ ನಿಗದಿತ ಮರುಪಾವತಿ ಶುಲ್ಕದೊಂದಿಗೆ ಆಡಳಿತ ಮಂಡಳಿ ನಿಗದಿಪಡಿಸಿದ ಇತರ ಶುಲ್ಕಗಳನ್ನು ವಿದ್ಯಾರ್ಥಿಗಳು ಪಾವತಿಸಬೇಕಿದೆ.

ಈ ಶುಲ್ಕವು ಮರುಪಾವತಿಯಾಗುವುದಿಲ್ಲ. ಇದು ಕನಿಷ್ಠ 20ರಿಂದ 50 ಸಾವಿರ ರೂ.ಗಳವರೆಗೂ ಇರುತ್ತದೆ. ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ಈ ಶುಲ್ಕವನ್ನು ಪಾವತಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರೀಕೃತ ಪ್ರಾಧಿಕಾರಗಳು ಸೀಟು ಹಂಚಿಕೆ ವೇಳೆ ನಿಗದಿ ಮಾಡುವ ಶುಲ್ಕ ದೊಂದಿಗೆ ಸಂಬಂಧಪಟ್ಟ ವಿಶ್ವವಿದ್ಯಾಲಯವು ನಿಗದಿ ಪಡಿಸುವ ಪರೀಕ್ಷಾ ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯ ಕ್ರಮದಡಿ ಮಂಜೂರು ಮಾಡಲು ನಿರ್ಧರಿಸಿದೆ.

ಯಾರಿಗೆ ಅನ್ವಯ?

2024-25ನೇ ಸಾಲಿನಿಂದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮ, ಆಯುಷ್, ಎಂಸಿಎ, ಎಂಬಿಎ, ನರ್ಸಿಂಗ್, ಪ್ಯಾರಾ ಮೆಡಿಕಲ್, ಬಿ.ಇಡಿ , ಇತರ ಕೋರ್ಸ್, ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್​ಗಳ ಸರ್ಕಾರಿ ಕಾಲೇಜು, ಅನುದಾನಿತ ಕಾಲೇಜು, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟು, ಖಾಸಗಿ ಕೋಟಾ ಹಾಗೂ ಕಾಮೆಡ್-ಕೆ ಮೂಲಕ ಪಡೆಯುವ ಇಂಜಿನಿಯರಿಂಗ್ ಕೋರ್ಸ್, ಸೂಪರ್ ನ್ಯೂಮರರಿ ಕೋಟಾದಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಶಿಕ್ಷಣದ ಮೂಲಕವೇ ವೈಚಾರಿಕ ವೈಜ್ಞಾನಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಬಾಬಾ ಸಾಹೇಬರ ಆಶಯ ಮತ್ತು ಸರ್ಕಾರದ ಆಶಯ ಕೂಡ ಇದೇ ಆಗಿದೆ. ಹೀಗಾಗಿ, ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ. | ಡಾ. ಎಚ್.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಇಲಾಖೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net