ಬಂಡೀಪುರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಫಾರಿ: ಪ್ರಕೃತಿ ಶಿಕ್ಷಣಕ್ಕಾಗಿ 'ಬಂಡೀಪುರ ಮಿತ್ರ' ಯೋಜನೆ

Bandipur Tiger Reserve
Published on

ಗುಂಡ್ಲುಪೇಟೆ: ದಟ್ಟ ಕಾನನದಲ್ಲಿ ತಂಪಾದ ಗಾಳಿಯೊಂದಿಗೆ ಪಕ್ಷಿಗಳ ಕಲರವ, ಚಿಲಿಪಿಲಿ ಸದ್ದು, ಸರೀಸೃಪಗಳು, ವನ್ಯ ಪ್ರಾಣಿಗಳು, ಜಿಂಕೆ ಮರಿಗಳ-ಅನೆಮರಿಗಳ ಚಿನ್ನಾಟ... ಎಲ್ಲವನ್ನೂ ಕಣ್ತುಂಬಿಕೊಳ್ಳಲು ಬಂಡೀಪುರಕ್ಕೆ ಸರ್ಕಾರಿ ಶಾಲಾ ಮಕ್ಕಳು ಆಗಮಿಸಲಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶವೆಂದು ಘೋಷಣೆಯಾಗಿ 50 ವರ್ಷ ಸಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಫಾರಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆಂದೇ ಅರಣ್ಯ ಇಲಾಖೆಯು ಖರೀದಿಸಿದ ಎರಡು ಬಸ್​ಗಳು ಭಾನುವಾರ ಸಂಜೆಯೇ ಮೇಲುಕಾಮನಹಳ್ಳಿಗೆ ಆಗಮಿಸಿವೆ.

"ಬಂಡೀಪುರ ಮಿತ್ರ'' ಯೋಜನೆಯಡಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ಉಚಿತ ಸಫಾರಿ ಆಯೋಜಿಸಲಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಹಾಗೂ ವನ್ಯಜಿವಿಗಳ ಬಗ್ಗೆ ಪ್ರೀತಿ ಮೂಡುವಂತೆ ಮಾಡಲು ಅರಣ್ಯ ಇಲಾಖೆ ಯೋಜನೆ ರೂಪಿಸಿದ್ದು, ಇದಕ್ಕಾಗಿ ತಲಾ 26 ಲಕ್ಷ ರೂ. ವೆಚ್ಚದಲ್ಲಿ 30 ಆಸನ ಸಾಮರ್ಥ್ಯದ ಎರಡು ಬಸ್​ಗಳನ್ನು ಖರೀದಿಸಿದೆ. ಮೇಲುಕಾಮನಹಳ್ಳಿ ಬಳಿಯಿರುವ ಸಫಾರಿ ಟಿಕೆಟ್​ ಕೌಂಟರ್​ಗೆ ಬಸ್​ಗಳು ಆಗಮಿಸಿವೆ.

ಇಂದು ಮತ್ತು ನಾಳೆ(ಜ. 2, 3) ಬಂಡೀಪುರದಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಜೀವಶಾಸ್ತ್ರ ಸಚಿವ ಭೂಪೇಂದ್ರ ಯಾದವ್​ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಭೆ ನಡೆಸಿದ ನಂತರ ಉಚಿತ ಸಫಾರಿ ನಡೆಸಲು ಬಸ್​ಗಳಿಗೆ ಚಾಲನೆ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net