

ಶಿವಮೊಗ್ಗ: ಹೊಸ ವರ್ಷಾಚರಣೆ ವೇಳೆ ಶನಿವಾರ ರಾತ್ರಿ ವಿದ್ಯಾನಗರದಲ್ಲಿ ಅವಘಡವೊಂದು ಸಂಭವಿಸಿದೆ. ರಾತ್ರಿ 12ಕ್ಕೆ ಸರಿಯಾಗಿ ಹ್ಯಾಪಿ ನ್ಯೂ ಇಯರ್ ಎನ್ನುತ್ತಾ ಗಾಳಿಯಲ್ಲಿ ಗುಂಡು ಹಾರಿದ ಕ್ಷಣಾರ್ಧದಲ್ಲೇ ಯಾರೂ ಊಹಿಸಿರದ ದುರಂತ ಸಂಭವಿಸಿದೆ. ವ್ಯಕ್ತಿಯೊಬ್ಬರ ಮಾಡಿದ ಏರ್ ಫೈರಿಂಗ್ ಯುವಕನಿಗೆ ತಗುಲಿ ಗಾಯಗೊಂಡಿದ್ದು, ಅತ್ತ ಏರ್ ಫೈರಿಂಗ್ ಮಾಡಿದ ಮನೆಯ ಮಾಲೀಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವಿದ್ಯಾನಗರದ 4ನೇ ತಿರುವಿನಲ್ಲಿ ಗೋಪಾಲ ಗ್ಲಾಸ್ ಹೌಸ್ನ ಮಾಲೀಕ ಮಂಜುನಾಥ ಓಲೇಕಾರ್ ಮೃತರು. ಪಾರ್ಟಿಯಲ್ಲಿದ್ದ ಸ್ಥಳೀಯ ವಿನಯ್ ಎಂಬಾತ ಗಾಯಗೊಂಡಿದ್ದಾರೆ.
ತಡರಾತ್ರಿ ಮಂಜುನಾಥ ಅವರ ಮನೆಯಲ್ಲಿ ನವ ಸಂವತ್ಸರವನ್ನು ಅದ್ದೂರಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಮಂಜುನಾಥ ಅವರು ಮನೆಯಲ್ಲಿದ್ದ ಏರ್ ಗನ್ ತಂದು -ಫೈರ್ ಮಾಡಿ ಸಂಭ್ರಮಿಸಲು ಮುಂದಾಗಿದ್ದರು. ಈ ವೇಳೆ ಮಿಸ್ ಫೈರ್ ಆಗಿ ವಿನಯ್ಗೆ ತಗುಲಿದೆ. ಗಾಯಾಳುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಚಾತುರ್ಯದಿಂದ ಸಂಭವಿಸಿದ ಘಟನೆಯಿಂದ ಘಾಸಿಗೊಂಡ ಮಂಜುನಾಥ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.