ಅರಸೀಕೆರೆ: ತಿಪಟೂರು ತಾಲೂಕಿನ ಸುಕ್ಷೇತ್ರ ಕೆರಗೋಡಿ ರಂಗಾಪುರ ಶ್ರೀ ಮಠದ ಪೀಠಾಧಿಪತಿ ಶೀ ಗುರುಪರ ದೇಶಿಕೇಂದ್ರ ಸ್ವಾಮೀಜಿ ಅವರ 73ನೇ ಜನ್ಮ ವರ್ಧಂತಿ (ಹುಟ್ಟು ಹಬ್ಬದ) ನಿಮಿತ್ತ ಮಠದ ಆವರಣದಲ್ಲಿ ಏ.5ರಂದು ಬೆಳಗ್ಗೆ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಐಟಿಐ ಕಾಲೇಜು ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಹ ಕಾರ್ಯದರ್ಶಿ ಕಾಟೀಕೆರೆ ಶಂಕರಪ್ಪ ತಿಳಿಸಿದರು.
ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ತನ್ಮಯಿ ಊಂಡ್ ಕೇರ್, ರೋಟರಿ ಕ್ಲಬ್, ತಿಪಟೂರಿನ ವೈಭವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಮಠದ ಆವರಣದಲ್ಲಿ ಬೆಳಗ್ಗೆ 9ರಿಂದ ಸಂಜೆ 3 ಗಂಟೆವರೆಗೆ ಆರೋಗ್ಯ ತಪಾಸಣೆ ನಡೆಯಲಿದೆ. ಸೀಳು ತುಟಿ, ಮುಖ, ಮೂಗಿನ ಚಿಕಿತ್ಸೆ, ಶುಗರ್, ಬಿಪಿ ಒಳಗೊಂಡಂತೆ ಇನ್ನಿತರ ಆರೋಗ್ಯ ಪರೀಕ್ಷೆ ನಡೆಯಲಿದೆ. ಆಸಕ್ತರು ನಿಗದಿತ ಸಮಯಕ್ಕೆ ಆಗಮಿಸಿ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪನ್ಯಾಸಕ ಬಂಡೀಹಳ್ಳಿ ಗಂಗಾಧರ್ ಮಾತನಾಡಿ, ತುಮಕೂರು, ಹಾಸನ ಸೇರಿದಂತೆ ವಿವಿಧೆಡೆ ಡಿಪ್ಲೊಮಾ, ಐಟಿಐ, ಪ್ರೌಢಶಾಲೆಗಳನ್ನು ತೆರೆದು ಸಹಸ್ರಾರು ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನದಾಸೋಹ, ಅರಿವು ಮೂಡಿಸುವ ಕೆಲಸ ಶ್ರೀ ಮಠದ ವತಿಯಿಂದ ನಿರಂತರವಾಗಿ ನಡೆಯುತ್ತಿದೆ. ಹಿರಿಯ ವಿದ್ಯಾರ್ಥಿಗಳು, ನೌಕರರು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ನಾಗರಿಕ ಸಮುದಾಯದ ವತಿಯಿಂದ ಸ್ವಾಮೀಜಿ ಅವರ ಜನ್ಮ ವರ್ಧಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ವಿವರಿಸಿದರು.