

ಶಿವಮೊಗ್ಗ: ಅನಂತ ಲಲಿತಕಲಾ ಫೌಂಡೇಶನ್‌ನಿಂದ ಭೀಮ ಸಿನಿಮಾ ಖ್ಯಾತಿಯ ಪ್ರಿಯಾ ಶಠಮರ್ಷಣ ಹಾಗೂ ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾ ಖ್ಯಾತಿಯ ಅವಿನಾಶ್ ಶಠಮರ್ಷಣ ಸಾರಥ್ಯದಲ್ಲಿ ಆಡು ಆಟ ಆಡು ಮಕ್ಕಳ ಉಚಿತ ಬೇಸಿಗೆ ಶಿಬಿರವನ್ನು ಏ.10ರಿಂದ ಎರಡು ಬ್ಯಾಚ್‌ಗಳಲ್ಲಿ ಕೀರ್ತಿನಗರದ ವನಿತಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಸಂಸ್ಥಾಪಕಿ ರಮ್ಯಾ ಹೇಳಿದರು.
8 ವರ್ಷ ಮೇಲ್ಪಟ್ಟು ಪಿಯುಸಿವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಆಸಕ್ತಿ ಇದ್ದರೆ ಪದವಿವರೆಗಿನವರೂ ಭಾಗವಹಿಸಬಹುದು. 21 ದಿನಗಳ ಶಿಬಿರ ಇದಾಗಿದ್ದು ಪ್ರತಿದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರವರಗೆ ನಡೆಯಲಿದೆ. ಏ.10ರಿಂದ ಮೇ 1ರವರೆಗೆ ಮೊದಲ ಬ್ಯಾಚ್, ಮೇ 5ರಿಂದ 26ರವರೆಗೆ 2ನೇ ಬ್ಯಾಚ್ ಇರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಗೀತದಲ್ಲಿ ರಂಗಗೀತೆ, ಜನಪದ ಗೀತೆ, ಭಾವಗೀತೆ, ನೃತ್ಯದಲ್ಲಿ ಜನಪದ, ಪಾಶ್ಚಾತ್ಯ, ಯಕ್ಷಗಾನ, ಕೋಲಾಟ, ಡೊಳ್ಳು ಕುಣಿತ, ನಾಟಕದಲ್ಲಿ ಮೂಕಾಭಿನಯ, ಏಕಪಾತ್ರಾಭಿನಯ, ಮಕ್ಕಳ ನೀತಿ ನಾಟಕ ಇರಲಿದೆ. ಕಲೆಯಲ್ಲಿ ಚಿತ್ರಕಲೆ, ಕರಕುಶಲ, ರಂಗೋಲಿ, ರಂಗಾಟ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಾಗಿ ಆಟಗಳು ಇರಲಿವೆ ಎಂದು ಹೇಳಿದರು.
ಶಿಬಿರದ ಮಕ್ಕಳ ಜತೆ ಸಂಪನ್ಮೂಲ ವ್ಯಕ್ತಿಗಳ ಮುಖಾಮುಖಿ ಇರಲಿದೆ. ಶಿಬಿರದ ಕೊನೇ ದಿನ ಮನೋರಂಜನೆ ಕಾರ್ಯಕ್ರಮ ಇರಲಿದೆ. ಇದುವರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಉಚಿತವಾಗಿ ಶಿಬಿರ ಆಯೋಜಿಸಲಾಗಿದೆ ಎಂದರು.