ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ವಂಚನೆ

Published on

ಹನೂರು: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗವಿರುವ ಖಾಸಗಿ ಕಂಪ್ಯೂಟರ್ ಸೆಂಟರ್‌ನಲ್ಲಿ ವೃದ್ಧಾಪ್ಯ ವೇತನ ಮಂಜೂರಾತಿಗಾಗಿ ವೃದ್ಧಯೊಬ್ಬರೂ 3 ಸಾವಿರ ರೂ. ನೀಡಿ ವಂಚನೆಗೆ ಒಳಗಾಗಿರುವುದು ಶುಕ್ರವಾರ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಾಲೂಕಿನ ಬಂಡಳ್ಳಿ ಗ್ರಾಮದ ತುಳಸಮ್ಮ (60) ಎಂಬುವರೇ ವಂಚನೆಗೆ ಒಳಗಾದವರು. ಇವರು ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ ವೇತನದ ಪಿಂಚಣಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಸಲುವಾಗಿ 5 ತಿಂಗಳ ಹಿಂದೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗವಿರುವ ಧ್ರುವ ಕಂಪ್ಯೂಟರ್ ಸೆಂಟರ್‌ಗೆ ಆಗಮಿಸಿದ್ದರು. ಈ ವೇಳೆ ಮಾಲೀಕ 3 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ತುಳಸಮ್ಮ ಅವರು ಒಂದು ಸಾವಿರ ರೂ. ಹಣವನ್ನು ಮುಂಗಡವಾಗಿ ನೀಡಿದ್ದರು. ಆದರೆ ಈ ಬಗ್ಗೆ ಕ್ರಮವಾಗದಿರುವುದನ್ನು ತಿಳಿದ ಪುತ್ರ ಮಾದೇಶ್ ಅವರು ಕಂಪ್ಯೂಟರ್ ಸೆಂಟರ್‌ಗೆ ತೆರಳಿ ವಿಚಾರಿಸಿದಾಗ ಮಾಲೀಕ ನಿಮ್ಮ ಅರ್ಜಿ ವಿ.ಎ ಹಾಗೂ ಆರ್‌ಐ ಬಳಿ ಇದೆ ಎಂದು ಸಬಾಬು ಹೇಳುತ್ತಿದ್ದರು.

ಬಳಿಕ ಮಾದೇಶ್ ಅವರು 2 ಸಾವಿರ ರೂ. ಹಣವನ್ನು ನೀಡಿ ಶೀಘ್ರ ಮಂಜೂರಾತಿ ಪತ್ರವನ್ನು ನೀಡುವಂತೆ ಮನವಿ ಮಾಡಿದ್ದರು. ತಿಂಗಳು ಕಳೆದರೂ ಈ ಬಗ್ಗೆ ಮಾಲೀಕ ಮೌನವಾಗಿರುವುದನ್ನು ಮನಗಂಡು ಕಂಪ್ಯೂಟರ್ ಸೆಂಟರ್‌ಗೆ ತೆರಳಿ ವಿಚಾರಿಸಿದಾಗ ಮಾಲೀಕ 3 ಸಾವಿರ ರೂ. ಪಡೆದುಕೊಂಡಿರುವುದು ನನಗೊಬ್ಬನಿಗೆ ಅಲ್ಲ. ವಿಎಗೆ 500 ರೂ, ಆರ್‌ಐಗೆ 500 ರೂ. ಹಾಗೂ ತಹಸೀಲ್ದಾರ್‌ಗೆ ಒಂದು ಸಾವಿರ ರೂ. ನೀಡಬೇಕು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net