

ಬೆಂಗಳೂರು: ಹೊರದೇಶಗಳಲ್ಲಿ ಕೆಲಸ ಮಾಡಲು ವೀಸಾ ಮಾಡಿಸಿಕೊಡುವುದಾಗಿ 51 ಮಂದಿಯಿಂದ 2.64 ಕೋಟಿ ರೂ. ಪಡೆದು ನಕಲಿ ವೀಸಾ ನೀಡಿ ವಂಚಿಸಿದ್ದ ದಂಪತಿಯನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿಲಕ್‌ನಗರದ ಸಕ್ಲೇನ್ ಸುಲ್ತಾನ್ (34) ಮತ್ತು ಈತನ ಪತ್ನಿ ನಿಖಿತಾ ಸುಲ್ತಾನ್ (28) ಬಂಧಿತರು. 2 ಕಾರು, 2 ಬೈಕ್, 66 ಲಕ್ಷ ರೂ. ನಗದು, 24 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ರಾಜಸ್ಥಾನ ಮೂಲದ ಮಗ್ ಸಿಂಗ್ ಎಂಬಾತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ರೇಸ್ ಕೋರ್ಟ್‌ನಲ್ಲಿ ಹಾರ್ಸ್ ರೈಡಿಂಗ್ ತರಬೇತಿಗೆ ಸಕ್ಲೇನ್ ಮತ್ತು ನಿಕಿತಾ ಸೇರಿದ್ದು, ಅಲ್ಲಿಯೇ ಪರಿಚಯವಾಗಿ ಮದುವೆಯಾಗಿದ್ದರು. ಈ ವೇಳೆ ಜಾಕಿ ಪರಿಚಯವಾಗಿ, ವಿದೇಶದಲ್ಲಿ ಜಾಕಿ ಅಥವಾ ಕೆಲಸ ಮಾಡುವರಿಗೆ ಆಸಕ್ತಿ ಇದ್ದರೆ ವೀಸಾ ಕೊಡಿಸುತ್ತೇನೆ. ನಿಮಗೆ ಪರಿಚಯ ಇದ್ದವರನ್ನು ಕರೆತಂದರೆ 50 ಸಾವಿರ ರೂ. ಕಮಿಷನ್ ಕೊಡುವುದಾಗಿ ದಂಪತಿಗೆ ಆಮಿಷವೊಡ್ಡಿದ್ದ. ಆದರೆ ಯಾರೂ ಸಿಕ್ಕಿರಲಿಲ್ಲ. ಕೊನೆಗೆ ವೆಬ್‌ಸೈಟ್ ತೆರೆದಿದ್ದರು. ೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಜಪಾನ್, ನ್ಯೂಜಿಲೆಂಡ್, ದಕ್ಷಿಣ ಕೋರಿಯಾ, ಐರ್ಲೆಂಡ್, ಫ್ರಾನ್ಸ್, ಕೊಲ್ಲಿ ದೇಶಗಳಲ್ಲಿ ಜಾಕಿ, ಹಾರ್ಸ್ ರೈಡಿಂಗ್ ಬಾಯ್ಸ್, ಗ್ರೂಮಿಂಗ್, ಫೆರಿ ಸೇರಿ ಇತರ ನೌಕರಿಗೆ ವೀಸಾ ಕೊಡಿಸುವುದಾಗಿ ಜಾಹೀರಾತು ಪೋಸ್ಟ್ ಹಾಕಿದ್ದರು.
ದೂರುದಾರ ಮಗ್ ಸಿಂಗ್, ಜಾಹೀರಾತು ನೋಡಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ಆರೋಪಿಗಳು ‘ತಮ್ಮ ಕಂಪನಿ ಬೆಂಗಳೂರಿನಲ್ಲಿದ್ದು, ವಿದೇಶಗಳಲ್ಲಿ ಕೆಲಸ ಮಾಡಲು ವರ್ಕಿಂಗ್ ವೀಸಾ ಮಾಡಿಸುತ್ತೇವೆ’ ಎಂದು ಭರವಸೆ ನೀಡಿದ್ದರು. ವೀಸಾ ಕೊಡಿಸಲು ತಲಾ 8 ಲಕ್ಷ ರೂ. ನೀಡಬೇಕು ಎಂದಿದ್ದರು. ಅದಕ್ಕೆ ಒಪ್ಪಿದ ಮಗ್ ಸಿಂಗ್, ಇಬ್ಬರು ಸ್ನೇಹಿತರ ಪಾಸ್‌ಪೋರ್ಟ್, ಶೈಕ್ಷಣಿಕ ದಾಖಲಾತಿಗಳನ್ನು ಆರೋಪಿಗಳಿಗೆ ವಾಟ್ಸ್‌ಆ್ಯಪ್ ಮುಖಾಂತರ ಕಳುಹಿಸಿದ್ದರು. 16 ಲಕ್ಷ ರೂ. ಪಡೆದು ಜಪಾನ್ ಮತ್ತು ನ್ಯೂಜಿಲೆಂಡ್ ವೀಸಾ ಮಾಡಿಸಿಕೊಟ್ಟಿದ್ದರು. ಈ ಇಬ್ಬರೂ ಜಪಾನ್ ಮತ್ತು ನ್ಯೂಜಿಲೆಂಡ್‌ನಲ್ಲಿ ಹಾರ್ಸ್ ರೈಡರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆರೋಪಿಗಳನ್ನು ನಂಬಿ ಮತ್ತೆ ಮೂವರು ಸ್ನೇಹಿತರಿಗೆ ವರ್ಕಿಂಗ್ ವೀಸಾ ಮಾಡಿಸಿಕೊಡುವಂತೆ ತಲಾ 8 ಲಕ್ಷ ರೂ. ನಂತೆ 24 ಲಕ್ಷ ರೂ. ಅನ್ನು ಮಗ್ ಸಿಂಗ್ ವರ್ಗಾಯಿಸಿದ್ದರು. ತಿಂಗಳು ಕಳೆದರೂ ವೀಸಾ ಮಾಡಿಸಿರಲಿಲ್ಲ. ಪ್ರಶ್ನಿಸಿದಾಗ ಎಂಬೆಸ್ಸಿಯಲ್ಲಿ ಬಾಕಿ ಇದ್ದು, ಕೆಲವೇ ದಿನಗಳಲ್ಲಿ ವೀಸಾ ಸಿಗಲಿದೆ ಎಂದು ಆರೋಪಿಗಳು ಹೇಳಿದ್ದರು.
3 ತಿಂಗಳ ಹಿಂದೆ ಮಗ್ ಸಿಂಗ್ ಅವರ ಮೂವರು ಸ್ನೇಹಿತರಿಗೆ ನ್ಯೂಜಿಲೆಂಡ್ ವೀಸಾ ನೀಡಿದ್ದರು. ಆನ್‌ಲೈನ್‌ನಲ್ಲಿ ಪರಿಶೀಲನೆ ಮಾಡಿದಾಗ ನಕಲಿ ಎಂಬುದು ಗೊತ್ತಾಗಿದೆ. ವಿಚಾರಿಸಲು ಕರೆ ಮಾಡಿದಾಗ, ಆರೋಪಿಗಳು ಕರೆ ಸ್ವೀಕರಿಸಿಲ್ಲ. ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ನೋಡಿದಾಗ ನಕಲಿ ವಿಳಾಸ ಎಂಬುದು ಗೊತ್ತಾಗಿದೆ. ಕೊನೆಗೆ ಮಗ್ ಸಿಂಗ್ ಆರೋಪಿಗಳ ವಿರುದ್ಧ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಸಿಪಿ ಗೋವರ್ಧನ್ ಗೋಪಾಲ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಪಿ.ಎಸ್. ಈಶ್ವರಿ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.