ಫೇಕ್ ವೆಬ್​ಸೈಟ್​ಗಳ ಹಾವಳಿ: ಶಾಪಿಂಗ್, ನೌಕರಿ, ತರಬೇತಿ ಹೆಸರಲ್ಲಿ ಮೋಸ; ಜನರ ಸಾವಿರಾರು ಕೋಟಿ ರೂಪಾಯಿ ಲೂಟಿ

Scam
Published on

| ಕೀರ್ತಿನಾರಾಯಣ ಸಿ. ಬೆಂಗಳೂರು 
ಸುಪ್ರೀಂಕೋರ್ಟ್​ನ ಅಧಿಕೃತ ವೆಬ್​ಸೈಟ್ ಹೋಲುವಂತೆ ನಕಲಿ ವೆಬ್​ಸೈಟ್ ಸೃಷ್ಟಿಸಿ ದಾವೆದಾರರು ಹಾಗೂ ವಕೀಲರ ವೈಯಕ್ತಿಕ ಮಾಹಿತಿಗೆ ಕನ್ನಹಾಕಲು ಯತ್ನಿಸಿರುವ ಪ್ರಕರಣದ ಬೆನ್ನಲ್ಲೇ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಜಾಲತಾಣ ನಕಲು ಮಾಡಿ ಸೃಷ್ಟಿಯಾಗಿರುವ ‘ನಕಲಿ ವೆಬ್​ಸೈಟ್’ಗಳ ಹಾವಳಿ ಮಿತಿಮೀರುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ಸೈಬರ್ ಕ್ರೖೆಂ ಪೊಲೀಸರ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಸೈಬರ್ ಖದೀಮರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವ ಅಮಾಯಕರ ಸಂಖ್ಯೆ ಏರುತ್ತಲೇ ಇದೆ.

ಆನ್​ಲೈನ್ ಶಾಪಿಂಗ್, ಉದ್ಯೋಗ ಆಮಿಷ, ಕೌಶಲ ತರಬೇತಿ, ಆದಾಯ ತೆರಿಗೆ, ಸಾಲ, ಬಿಟ್ ಕಾಯಿನ್ ವ್ಯವಹಾರ, ಷೇರು ವ್ಯವಹಾರ ಹೀಗೆ ತರಹೇವಾರಿ ವೆಬ್​ಸೈಟ್​ಗಳನ್ನು ಸೃಷ್ಟಿಸುವ ಮುಖೇನ ಹಣ ಕಟ್ಟಿಸಿಕೊಂಡು ಜನರನ್ನು ವಂಚನೆ ಮಾಡಲಾಗುತ್ತಿದೆ. ಎನ್​ಸಿಆರ್​ಬಿ ವರದಿ ಪ್ರಕಾರ 3 ವರ್ಷದಲ್ಲಿ ದೇಶದಲ್ಲಿ 30,631 ವಂಚನೆ ಪ್ರಕರಣಗಳು ದಾಖಲಾಗಿವೆ. ಸಾವಿರಾರು

ಕೋಟಿ ರೂ. ಹಣವನ್ನು ಸೈಬರ್ ವಂಚಕರು ದೋಚಿದ್ದು, ಆ ಪೈಕಿ 570 ಕೋಟಿ ರೂ. ಮೊತ್ತವನ್ನು ಪೊಲೀಸರು ಜಪ್ತಿ ಮಾಡಿ ವಾಪಸ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಜನಪ್ರಿಯತೆ ಪಡೆದಿರುವ ಬ್ರ್ಯಾಂಡ್ ಅಥವಾ ಕಂಪನಿಗಳಿಗೆ ಹೋಲುವಂತೆ ನಕಲಿ ವೆಬ್​ಸೈಟ್​ಗಳನ್ನು ಸೃಷ್ಟಿಸಿ ವಂಚನೆ ಮಾಡಲಾಗುತ್ತಿದೆ.

ಉದಾಹರಣೆಗೆ ಡಿ ಮಾರ್ಟ್, ಬಿಗ್ ಬಜಾರ್, ಬಿಗ್ ಬಾಸ್ಕೆಟ್, ರಿಲಯನ್ಸ್​ನಂತಹ ಪ್ರತಿಷ್ಠಿತ ಕಂಪನಿಗಳ ವೆಬ್​ಸೈಟ್ ಹೋಲುವಂತೆ ನಕಲು ಮಾಡಿ ಗ್ರಾಹಕರು ಖರೀದಿಸುವ ಉತ್ಪನ್ನಕ್ಕೆ ಆನ್​ಲೈನ್​ನಲ್ಲೇ ಹಣ ಪಾವತಿಸಿಕೊಂಡು ಉತ್ಪನ್ನ ಕಳುಹಿಸದೆ ಮೋಸ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಮತ್ತು ರಾಜ್ಯಗಳ ಸಾರ್ವಜನಿಕ ಸೇವಾ ವೆಬ್​ಸೈಟ್​ಗಳ ಹೆಸರಲ್ಲೂ ಮೋಸ ಮಾಡಲಾಗುತ್ತಿದೆ.

ತಿರುಪತಿ ದರ್ಶನದ ಹೆಸರಲ್ಲೂ ಮೋಸ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಕೊಡುವ ನೆಪದಲ್ಲಿ ಹಲವಾರು ನಕಲಿ ವೆಬ್​ಸೈಟ್​ಗಳು ಸೃಷ್ಟಿಯಾಗಿವೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಹೆಚ್ಚಿನವರು ಟಿಕೆಟ್​ಗಾಗಿ ಹಣ ಪಾವತಿಸಿ ಮೋಸ ಹೋಗಿದ್ದಾರೆ. ಪೊಲೀಸರು ಈವರೆಗೆ 41ಕ್ಕೂ ಅಧಿಕ ನಕಲಿ ವೆಬ್​ಸೈಟ್​ಗಳನ್ನು ಸ್ಥಗಿತಗೊಳಿಸಿದ್ದಾರೆ. ವಿಐಪಿ ದರ್ಶನ ಕಲ್ಪಿಸುವುದಾಗಿ ಹಣ ಪಡೆದು ವಂಚಿಸಲಾಗುತ್ತಿತ್ತು. ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಗ್ಯಾಂಗ್​ಗಳು ಇದರಲ್ಲಿರುವ ಬಗ್ಗೆ ಸೈಬರ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಉದ್ಯೋಗ ಖಾತ್ರಿ ಮೇಲೂ ಕಣ್ಣು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಹೆಸರಲ್ಲಿ ನಕಲಿ ವೆಬ್​ಸೈಟ್ ಸೃಷ್ಟಿಸಲಾಗಿತ್ತು. ’http://rojgarsevak.org’ ಅಸಲಿ ವೆಬ್​ಸೈಟ್ ಅಲ್ಲ ಇದು ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಗೊತ್ತಾಗಿದೆ. https://nrega.nic.in ಇದೊಂದೆ ಅಧಿಕೃತ ವೆಬ್​ಸೈಟ್ ಎಂದು ಸ್ಪಷ್ಟಪಡಿಸಿದೆ.

ಪೊಲೀಸರ ಸಲಹೆ ಏನು?

- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ವೆಬ್​ಸೈಟ್ ಹೌದೋ ಅಲ್ಲವೋ ಎಂಬುದನ್ನು ಪರಿಶೀಲಿಸಿ ನಂತರ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಿ.

- ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ, ಶುಲ್ಕ ರೂಪದಲ್ಲಿ ಹಣ ಪಾವತಿಸುವಾಗ ಆ ವೆಬ್​ಸೈಟ್​ನ ಅಸಲೀತನ ಪರಿಶೀಲಿಸಿ.

- ಮೊಬೈಲ್, ಶೂ, ಬಟ್ಟೆ, ಚರ್ಮದ ಪರಿಕರ, ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳು ಸೇರಿ ದುಬಾರಿ ಬೆಲೆಯ ಉತ್ಪನ್ನಗಳ ಮೇಲೆ ಹೆಚ್ಚು ರಿಯಾಯಿತಿ ಘೋಷಣೆ ನಂಬಬೇಡಿ.

- ಶಾಪಿಂಗ್ ಪೋರ್ಟಲ್​ನ ಅಸಲಿತನದ ಬಗ್ಗೆ ಇಂಟರ್ನೆಟ್​ನಲ್ಲಿ ಪರಿಶೀಲಿಸಿ. ಉತ್ಪನ್ನಗಳ ವಿತರಣೆಯ ಬಗ್ಗೆ ಹೆಚ್ಚು ದೂರುಗಳ ರಿವ್ಯೂ ಇದ್ದರೆ ನಂಬಬೇಡಿ.

- ಕ್ಯಾಶ್-ಆನ್ ಡೆಲಿವರಿ ಇದ್ದರಷ್ಟೇ ಉತ್ಪನ್ನ ಬುಕ್ ಮಾಡಿ. ಡೆಲಿವರಿ ಬಂದ ನಂತರ ಅದನ್ನು ತೆರೆದು ನೀವು ಬುಕ್ ಮಾಡಿದ ಉತ್ಪನ್ನ ಇದೆಯೇ ಎಂದು ಪರಿಶೀಲಿಸಿ ನಂತರ ಹಣ ಕೊಡಿ.

- ಉತ್ಪನ್ನ ಕೊಡದೆ ವಂಚಿಸುವ ಜತೆಗೆ ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು ಡಾರ್ಕ್​ವೆಬ್​ನಲ್ಲಿ ಮಾರುವ ಸಾಧ್ಯತೆ ಇದೆ. ಲಿಂಕ್ ಪರಿಶೀಲಿಸಿದ ನಂತರವೇ ಹಣ ಪಾವತಿಸಿ.

ತಕ್ಷಣ 1930ಗೆ ಕರೆ ಮಾಡಿ: ಸೈಬರ್ ಅಪರಾಧಕ್ಕೆ ತುತ್ತಾಗಿರುವುದು ಗೊತ್ತಾದ ತಕ್ಷಣ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ. ಕರೆ ಉಚಿತವಾಗಿದ್ದು, ಸ್ಥಳೀಯ ಭಾಷೆಯಲ್ಲೇ ಮಾಹಿತಿ ಪಡೆದುಕೊಂಡು ದೂರು ದಾಖಲಿಸಿ, ಮುಂದೇನು ಮಾಡಬೇಕು ಎಂಬುದರ ಕುರಿತಾಗಿಯೂ ಸಹಾಯವಾಣಿ ಸಿಬ್ಬಂದಿಯೇ ಮಾರ್ಗದರ್ಶನ ನೀಡುತ್ತಾರೆ.

ಕೆಪಿಸಿಸಿ ಹೆಸರಲ್ಲೂ ನಕಲಿ ವೆಬ್​ಸೈಟ್: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹೆಸರಿನಲ್ಲಿ ನಕಲಿ ವೆಬ್​ಸೈಟ್ ಸೃಷ್ಟಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ಕೆಲವೇ ದಿನಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ವೆಟ್ ಫ್ಯಾಬ್ ಟೆಕ್ನಾಲಿಜಿಸ್ ಪ್ರೖೆವೇಟ್ ಲಿಮಿಟೆಡ್​ನ ನಿರ್ದೇಶಕರಾದ ಧರಣೇಶ್ ಜೈನ್, ಅರುಣ್, ಸಿದ್ಧಾರ್ಥ್ ಮತ್ತು ಉದ್ಯೋಗಿ ವೆಂಕಟೇಶ್ ಎಂಬುವರು ಕೃತ್ಯ ಎಸಗಿದ್ದರು. ಪಕ್ಷದ ನಾಯಕರಿಗೆ ಅಗೌರವ ತರುವಂತಹ ಹೇಳಿಕೆಗಳನ್ನು ಪ್ರಕಟಿಸುವ ಉದ್ದೇಶ ಹೊಂದಿದ್ದರು.

ಸರ್ಕಾರಿ ವೆಬ್​ಸೈಟ್​ಗಳಿಗೆ ಹೋಲುವಂತೆ ನಕಲಿ ವೆಬ್​ಸೈಟ್ ಸೃಷ್ಟಿಸಲಾಗುತ್ತದೆ. ಇದರಲ್ಲಿ ಜನರ ವೈಯಕ್ತಿಕ ಮಾಹಿತಿಯನ್ನಷ್ಟೇ ಕದಿಯಲಾಗುತ್ತದೆ. ಆನ್​ಲೈನ್ ಶಾಪಿಂಗ್​ನಂತಹ ಬೇರೆ ನಕಲಿ ವೆಬ್​ಸೈಟ್​ಗಳಲ್ಲಿ ಹಣ ಲಪಟಾಯಿಸಲಾಗುತ್ತದೆ. ಆದ್ದರಿಂದ ಯಾವುದೇ ವೆಬ್​ಸೈಟ್​ನಲ್ಲಿ ವ್ಯವಹರಿಸುವ ಮುನ್ನ ಅದರ ನೈಜತೆ ಬಗ್ಗೆ ಪರಿಶೀಲಿಸಬೇಕು. ವಾಟ್ಸ್​ಆಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಲಿಂಕ್​ಗಳನ್ನು ತೆರೆಯಬೇಡಿ. ಇತ್ತೀಚೆಗೆ ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್​ಸೈಟ್ ಸೃಷ್ಟಿಸಲಾಗಿತ್ತು. | ಡಾ.ಎಸ್.ಡಿ.ಶರಣಪ್ಪ, ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಬೆಂಗಳೂರು

ಪಾಸ್​ಪೋರ್ಟ್ ಸೇವೆ ಹೆಸರಲ್ಲಿ ಮೋಸ!: ಕಳೆದ ತಿಂಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿ ಪಾಸ್​ಪೋರ್ಟ್ ಸೇವೆ ಪಡೆಯಲು ಗೊತ್ತುಪಡಿಸಿದ ವೆಬ್​ಸೈಟ್ ಹೋಲುವಂತೆ ನಕಲಿ ವೆಬ್​ಸೈಟ್ ತೆರೆದು ವೈಯಕ್ತಿಕ ಮಾಹಿತಿ ಕದಿಯಲು ಯತ್ನ ನಡೆದಿತ್ತು. ಈ ಬಗ್ಗೆ ಖುದ್ದು ಕೇಂದ್ರ ಸರ್ಕಾರವೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. http://www.passportindia.gov.in ಭಾರತ ಸರ್ಕಾರದ ಅಧಿಕೃತ ವೆಬ್​ಸೈಟ್ ಆಗಿದ್ದು, ಇಲ್ಲೇ ಸೇವೆ ಪಡೆಯಲು ಸೂಚಿಸಿದೆ. http://www.indiapassport.org, http://www.online-passportindia.comhttp://www.passportindiaportal.in ವೆಬ್​ಸೈಟ್​ಗಳು ನಕಲಿ ಎಂದು ಘೋಷಿಸಿದೆ.

ಹೇಗೆ ವಂಚನೆ?

  • ಅಸಲಿ ಬ್ರ್ಯಾಂಡ್ ಅಥವಾ ಕಂಪನಿಗೆ ಹೋಲುವಂತೆ ನಕಲಿ ವೆಬ್​ಸೈಟ್ ಸೃಷ್ಟಿಸಿ, ಉತ್ಪನ್ನಕ್ಕೆ ಆನ್​ಲೈನ್​ನಲ್ಲಿ ಹಣ ಪಾವತಿಸಿಕೊಂಡು ಮೋಸ.
  • ಯಾವುದೋ ಒಂದು ಹೆಸರಲ್ಲಿ ವೆಬ್​ಸೈಟ್ ಸೃಷ್ಟಿಸಿ, ಕಡಿಮೆ ಬೆಲೆಗೆ ಉತ್ನನ್ನ ಮಾರುವುದಾಗಿ ಜಾಹೀರಾತು ಕೊಟ್ಟು, ಹಣ ಪಾವತಿಸಿಕೊಂಡ ನಂತರ ನಾಪತ್ತೆ.
  • ಉತ್ಪನ್ನವನ್ನು ಖರೀದಿಸಿದರೆ ದುಬಾರಿ ಬೆಲೆಯ ಉಚಿತ ಉಡುಗೊರೆ ಸಿಗುತ್ತದೆಂದು ನಂಬಿಸಿ ಮೋಸ ಮಾಡುವುದು.
  • ಕೆಲ ವೆಬ್​ಸೈಟ್​ಗಳಲ್ಲಿ ದುಬಾರಿ ಬೆಲೆಯ ಉತ್ಪನ್ನ ಖರೀದಿ ಸಿದರೆ, ಆ ವಸ್ತು ಬದಲು ಬೇರೆನೋ ಕಳುಹಿಸಿ ವಂಚನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net