ತಿರುಪತಿಯಲ್ಲಿ ಕಡಿಮೆ ಬೆಲೆಗೆ ಭೂಮಿ ಕೊಡಿಸುವ ನೆಪದಲ್ಲಿ ವಂಚನೆ; ಪೊಲೀಸರಿಂದ ನಾಲ್ವರ ಸೆರೆ

CP (4)
Published on

ಬೆಂಗಳೂರು: ಆಂಧ್ರಪ್ರದೇಶದ ತಿರುಪತಿಯಲ್ಲಿ 13 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ಉದ್ಯಮಿಗೆ ವಂಚನೆ ಮಾಡಿದ್ದ ನಾಲ್ವರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ಪ್ರಭಾಕರ ರೆಡ್ಡಿ, ಸೋಲದೇನಹಳ್ಳಿಯ ಸಂಜಯ್, ಕೆಂಗೇರಿಯ ಶ್ರೀನಿವಾಸ್ ಮತ್ತು ಲೋಕನಾಥಚಾರಿ ಬಂಧಿತರು. 65 ಲಕ್ಷ ರೂ. ನಗದು, 8.5 ಲಕ್ಷ ರೂ.ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು 3 ಕಾರುಗಳನ್ನು ಜಪ್ತಿ ಮಾಡಲಾಗಿದೆ.

ತಿರುಪತಿಯ ರಾಧಾಕೃಷ್ಣ ಎಂಬುವರಿಗೆ ಆರೋಪಿಗಳು ಮೋಸ ಮಾಡಿದ್ದರು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಬಿ. ಭರತ್ ನೇತೃತ್ವದ ತಂಡ, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ತಿರುಪತಿಯ ರಾಧಾಕೃಷ್ಣ ಮತ್ತು ಬೆಂಗಳೂರಿನ ಶಿವಕುಮಾರ್ ಸ್ನೇಹಿತರು. ಇತ್ತೀಚೆಗೆ ರಾಧಾಕೃಷ್ಣಗೆ ಸಂಜಯ್, ಶ್ರೀನಿವಾಸ್, ಲೋಕನಾಥಚಾರಿ ಎಂಬುವರನ್ನು ಶಿವಕುಮಾರ್ ಪರಿಚಯ ಮಾಡಿಸಿದ್ದರು. ತಿರುಪತಿಯಲ್ಲಿ ನಮಗೆ ಪರಿಚಯಸ್ಥರ ಕೋಟ್ಯಂತರ ರೂ. ಮೌಲ್ಯದ 13 ಎಕರೆ ಆಸ್ತಿ ಇದ್ದು, ಅದನ್ನು 1 ಕೋಟಿ ರೂ.ಗೆ ಕೊಡಿಸುವುದಾಗಿ ಹೇಳಿದ್ದರು. ಈ ಸಂಬಂಧ ಮಾತುಕತೆಗೆ ನಗರದ ಅಶೋಕ ಹೋಟೆಲ್‌ಗೆ ರಾಧಾಕೃಷ್ಣ ಅವರನ್ನು ಆರೋಪಿಗಳು ಕರೆಸಿಕೊಂಡಿದ್ದರು. ಶಿವಕುಮಾರ್ ಹಾಗೂ ರಾಧಾಕೃಷ್ಣಗೆ ನಕಲಿ ದಾಖಲೆ ನೀಡಿದ್ದರು.

ಜಮೀನು ಮಾಲೀಕರ ಭೇಟಿ ನೆಪದಲ್ಲಿ ರಾಧಾಕೃಷ್ಣ ಅವರನ್ನು ಹೋಟೆಲ್‌ನಲ್ಲಿ ಕೂರಿಸಿ ಶಿವಕುಮಾರ್ ಅವರನ್ನು ಹಣದ ಸಮೇತ ಕಾರಿನಲ್ಲಿ ಆರೋಪಿಗಳು ಕರೆದೊಯ್ದಿದ್ದರು. ಮಾರ್ಗಮಧ್ಯೆ ತಂಪು ಪಾನೀಯ ತರುವಂತೆ ಹೇಳಿ ಶಿವಕುಮಾರ್ ಅವರನ್ನು ಕಾರಿನಿಂದ ಇಳಿಸಿದ ಆರೋಪಿಗಳು, ಹಣದ ಸಮೇತ ಪರಾರಿಯಾಗಿದ್ದರು.

ಹೋಟೆಲ್‌ಗೆ ಬಂದು ಗೆಳೆಯನನ್ನು ಭೇಟಿಯಾಗಿ ನಡೆದ ಘಟನೆಯನ್ನು ಶಿವಕುಮಾರ್ ಹೇಳಿದರು. ಕೊನೆಗೆ ಠಾಣೆಗೆ ತೆರಳಿ ರಾಧಾಕೃಷ್ಣ ದೂರು ನೀಡಿದರು. ತನಿಖೆಗಿಳಿದ ಪೊಲೀಸರು, ನಾಲ್ವರು ವಂಚಕರನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net