ಕಡಿಮೆ ಬೆಲೆಗೆ ಮೊಬೈಲ್ ಫೋನು ಎಂದು ದುಡ್ಡು ಪೀಕುತ್ತಿದ್ದ ಖದೀಮರು!

phone
Published on

ನವದೆಹಲಿ : ಜನರಿಗೆ ಕರೆ ಮಾಡಿ ಲಾಟರಿ ಸ್ಕೀಮಿನಲ್ಲಿ ಮೊಬೈಲ್​ ಫೋನುಗಳನ್ನು ಅಗ್ಗದ ಬೆಲೆಯಲ್ಲಿ ನೀಡುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಖದೀಮರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನವದೆಹಲಿಯ ರೋಹಿಣಿ ಸೆಕ್ಟರ್​-7 ಪ್ರದೇಶದಲ್ಲಿ ಈ ಉದ್ದೇಶಕ್ಕೆ ಬಳಸುತ್ತಿದ್ದ ನಕಲಿ ಕಾಲ್​ ಸೆಂಟರನ್ನು ಪತ್ತೆ ಹಚ್ಚಲಾಗಿದ್ದು, 15 ಮಹಿಳೆಯರು ಸೇರಿದಂತೆ 24 ಜನರನ್ನು ಬಂಧಿಸಲಾಗಿದೆ.

ಮುಖ್ಯ ಆರೋಪಿಗಳಾದ ದೆಹಲಿಯ ಸುಲ್ತಾನಪುರಿಯ ನಿವಾಸಿಗಳಾದ ರಾಮ್‌ಕುಮಾರ್ (34), ಶ್ಯಾಮ್ ಕುಮಾರ್ (35) ಮತ್ತು ಗೋವಿಂದ್ (22) ಒಟ್ಟಾಗಿ ಈ ಕಾಲ್ ಸೆಂಟರನ್ನು ನಡೆಸುತ್ತಿದ್ದರು. ಸುಳಿವಿನ ಮೇರೆಗೆ ಶುಕ್ರವಾರ ನಡೆಸಿದ ದಾಳಿಯಲ್ಲಿ ವಂಚನೆಯ ದಂಧೆ ಹೊರಬಂದಿದ್ದು, ಆರೋಪಿಗಳು ಹೆಚ್ಚಾಗಿ ಈಶಾನ್ಯ ರಾಜ್ಯಗಳಿಗೆ ಸೇರಿದ ಜನರನ್ನು ವಂಚಿಸುತ್ತಿದ್ದರು ಎಂದು ಡಿಸಿಪಿ ಪ್ರಣವ್​ ತಯಾಲ್ ಹೇಳಿದ್ದಾರೆ.

ಇಂಟರ್​ನೆಟ್​ನಿಂದ ಬೇರೆ ರಾಜ್ಯಗಳ ನಿವಾಸಿಗಳ ಫೋನ್​ ನಂಬರ್​ಗಳನ್ನು ಸಂಗ್ರಹಿಸಿ, ಕರೆ ಮಾಡುತ್ತಿದ್ದರು. ಅವರ ದೂರವಾಣಿ ಸಂಖ್ಯೆ ಲಾಟರಿಯಲ್ಲಿ ಆಯ್ಕೆಯಾಗಿದ್ದು, 17,000 ರೂ. ಮೌಲ್ಯದ ಮೊಬೈಲ್​ ಫೋನ್​ 4,500 ರೂ.ಗಳಿಗೆ ಸಿಗುತ್ತದೆ ಎಂದು ನಂಬಿಸಿ ಹಣ ಪೀಕುತ್ತಿದ್ದರು ಎನ್ನಲಾಗಿದೆ.

ತಮ್ಮ 'ಅದೃಷ್ಟವಂತ' ಗ್ರಾಹಕರನ್ನು ನಂಬಿಸಲು ಪೋಸ್ಟ್​ ಆಫೀಸಿನ ಮೂಲಕ ಮೊಬೈಲ್ ಕಳುಹಿಸುವುದಾಗಿ ಹೇಳುತ್ತಿದ್ದರು. ನಂತರ ಮೊಬೈಲ್​ನ ಬದಲಿಗೆ, ಅಗ್ಗದ ಪರ್ಸ್​ಗಳು, ಬೆಲ್ಟು, ಸೋಪು ಮುಂತಾದವನ್ನು ಪಾರ್ಸಲ್ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 3 ಕಂಪ್ಯೂಟರ್, 52 ಮೊಬೈಲ್​ ಮತ್ತು 384 ವಿವಿಧ ವಸ್ತುಗಳ ಪ್ಯಾಕೆಟುಗಳನ್ನು ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net