

ವಾಷಿಂಗ್ಟನ್ : ಭಾರತಕ್ಕೆ ಅಮೆರಿಕದ ಅಂಬಾಸಿಡರ್ ಆಗಲು ಲಾಸ್ ಏಂಜಲೀಸ್ ನಗರದ ಮೇಯರ್ ಆದ ಎರಿಕ್ ಗಾರ್ಸೆಟ್ಟಿ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಪ್ರಸ್ತಾಪಿಸಿದ್ದಾರೆ. ಈ ಪ್ರಸ್ತಾವನೆಯನ್ನು ಸೆನೆಟ್ ಅನುಮೋದಿಸಿದಲ್ಲಿ, 50 ವರ್ಷದ ಗಾರ್ಸೆಟ್ಟಿ ಅವರು ಮುಂಚಿನ ಅಂಬಾಸಿಡರ್ ಕೆನ್ನೆತ್ ಜಸ್ಟರ್ ಅವರ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಈ ವಾರದ ಆರಂಭದಲ್ಲಿ ಜಸ್ಟರ್ ಅವರನ್ನು ಅಮೆರಿಕದ ಫಾರಿನ್ ರಿಲೇಷನ್ಸ್ ಕೌನ್ಸಿಲ್ನ ಫೆಲ್ಲೋ ಆಗಿ ನೇಮಕ ಮಾಡಿದ್ದರಿಂದ ಭಾರತ ಅಂಬಾಸಿಡರ್ ಸ್ಥಾನ ತೆರವಾಗಿತ್ತು. ಹಲವು ಇತರ ದೇಶಗಳ ಅಂಬಾಸಿಡರ್ಗಳ ನಾಮನಿರ್ದೇಶನ ಮಾಡುತ್ತಾ, ಗಾರ್ಸೆಟ್ಟಿ ಅವರ ಹೆಸರನ್ನು ಭಾರತಕ್ಕಾಗಿ ಪ್ರಸ್ತಾವನೆ ಮಾಡಲಾಗಿದೆ.
2013 ರಿಂದ ಲಾಸ್ ಏಂಜಲೀಸ್ನ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಎರಿಕ್ ಎಂ ಗಾರ್ಸೆಟ್ಟಿ ಅವರು, ಅಲ್ಲಿನ ಮೆಟ್ರೋ ಚೇರ್ಮನ್ ಕೂಡ ಆಗಿದ್ದಾರೆ. ಕ್ಲೈಮೇಟ್ ಮೇಯರ್ಸ್ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರಾದ ಗಾರ್ಸೆಟ್ಟಿ ಪ್ಯಾರಿಸ್ ಕ್ಲೈಮೇಟ್ ಒಪ್ಪಂದವನ್ನು ಅಂಗೀಕರಿಸಿದ 400 ಅಮೆರಿಕದ ಮೇಯರ್ಗಳ ನೇತೃತ್ವ ವಹಿಸಿದ್ದಾರೆ. ಹವಾಮಾನ ಸಂಬಂಧಿತ ಕ್ರಮಗಳನ್ನು ಕೈಗೆತ್ತಿಕೊಂಡಿರುವ ಸಿ40 ಸಿಟೀಸ್ ಮುಖ್ಯಸ್ಥ ಕೂಡ ಆಗಿದ್ದು, ಈ ಬಗೆಗಿನ ಕಾರ್ಯವನ್ನು ಭಾರತದಲ್ಲಿ ವಿಸ್ತರಿಸುವುದರಲ್ಲಿ ಪಾಲ್ಗೊಂಡಿದ್ದಾರೆ. (ಏಜೆನ್ಸೀಸ್)