ಸೊಸೈಟಿ ಸೈಟ್ ಧೋಖಾ! ಹಣ ಕಟ್ಟಿ 5-10 ವರ್ಷ ಕಳೆದರೂ ಕೈಸೇರದ ನಿವೇಶನ; ಮುಚ್ಚುವ ಹಂತದಲ್ಲಿವೆ 362 ಗೃಹ ನಿರ್ಮಾಣ ಸಂಘಗಳು

Front 1
Published on

ಬೆಂಗಳೂರು: ಸಹಕಾರ ಸಂಘಗಳ ಮೂಲಕ ನಿವೇಶನ ಖರೀದಿಸುವ ಕನಸಿನೊಂದಿಗೆ ಸದಸ್ಯರಾಗಿ ಹಣ ಕಟ್ಟಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ! ರಾಜ್ಯಾದ್ಯಂತ ಸೈಟ್ ಕೊಡುವುದಾಗಿ ಹಣ ಪಡೆದಿರುವ 127 ಗೃಹ ನಿರ್ಮಾಣ ಸಹಕಾರ ಸಂಘಗಳು ಬಾಗಿಲು ಮುಚ್ಚಿದ್ದರೆ, ಇನ್ನೂ 362 ಸಂಘಗಳು ಬಂದ್ ಆಗುವ ಹಂತದಲ್ಲಿವೆ. ಕನಸಿನ ಮನೆ ನಿರ್ವಣಕ್ಕೆ ನಿವೇಶನ ಖರೀದಿಸಲು ಬಯಸುವ ಗ್ರಾಹಕರು ವಿಶ್ವಾಸಾರ್ಹ ಎಂದು ನಂಬಿ ಸಹಕಾರ ಸಂಘಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಪೂರ್ಣ ಹಣ ಪಾವತಿಸಿ 5-10 ವರ್ಷ ಕಳೆದರೂ ಹಲವರಿಗೆ ನಿವೇಶನ ಹಂಚಿಕೆಯಾಗುತ್ತಿಲ್ಲ. ಬಹುತೇಕ ಸೊಸೈಟಿಗಳು ಈವರೆಗೆ ಭೂಮಿಯನ್ನೇ ಖರೀದಿಸಿಲ್ಲ. ಇನ್ನೊಂದೆಡೆ ಸಹಕಾರ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟ ಸಹಕಾರ ಸಂಘಗಳೇ ನಷ್ಟದ ಹಾದಿಯಲ್ಲಿ ಮುಚ್ಚಲ್ಪಡುತ್ತಿವೆ. ಅಲ್ಲದೇ ಖಾಸಗಿ ಸಹಕಾರ ಸಂಘಗಳ ಜತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳ ನೌಕರರ ಸಂಘಗಳು ಕೂಡ ನಿವೇಶನ ಹಂಚಿಕೆಗೆ ವಿಳಂಬ ಮಾಡುತ್ತಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ 130 ಎಕರೆ ಪ್ರದೇಶದ ಹೆಲ್ತ್ ಸಿಟಿ ಬಡಾವಣೆಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಬಂಡವಾಳ ಹೂಡಿಕೆ ಮಾಡಿರುವವರಿಗೆ ಈವರೆಗೆ ನಿವೇಶನ ಹಂಚಿಕೆಯಾಗಿಲ್ಲ. ಇದರಿಂದ ಬೇಸತ್ತ ಹೂಡಿಕೆದಾರರು ಸಹಕಾರ ಸಂಘಗಳ ರಿಜಿಸ್ಟ್ರಾರ್​ಗೆ ದೂರು ನೀಡಿದ್ದಾರೆ. ಹೀಗೆ ನಿವೇಶನ ಹಂಚಿಕೆ ವಿಳಂಬ ಹಾಗೂ ವಂಚನೆ ಬಗ್ಗೆ ಬೇರೆಬೇರೆ ಸಂಘಗಳ ವಿರುದ್ಧ ಇಂತಹ ನೂರಾರು ದೂರುಗಳು ದಾಖಲಾಗಿವೆ.

ಕಣ್ಮುಚ್ಚಿ ಕುಳಿತ ಇಲಾಖೆ: ಈ ಎಲ್ಲ ಗೃಹ ನಿರ್ಮಾಣ ಸಹಕಾರ ಸಂಘಗಳು, ಸಹಕಾರ ಇಲಾಖೆ ಅಧೀನದಲ್ಲೇ ಬರುತ್ತವೆ. 279 ಸಂಘಗಳು ಸ್ಥಗಿತವಾಗಿರುವುದು, 362 ಸ್ಥಗಿತದ ಹಾದಿಯಲ್ಲಿವೆ. ಪ್ರಮುಖವಾಗಿ 127 ಸಂಘಗಳು ಕಳೆದ 5-10 ವರ್ಷದಿಂದ ನಿವೇಶನದಾರರಿಗೆ ನಿವೇಶನ ಕೊಟ್ಟಿಲ್ಲ. ಈ ವಿಚಾರ ಇಲಾಖೆ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ.

ಹೇಗಿರುತ್ತದೆ ವ್ಯವಹಾರ?

* ಕಡಿಮೆ ಬೆಲೆಗೆ ಹಾಗೂ ಒಳ್ಳೆಯ ಜಾಗದಲ್ಲಿ ಬಡಾವಣೆ ರೂಪಿಸಿ ನಿವೇಶನ ಕೊಡುವುದಾಗಿ ಆಮಿಷ
* ಸದಸ್ಯತ್ವ ಶುಲ್ಕ ಪಡೆದ ಹಲವು ವರ್ಷಗಳ ಬಳಿಕ, ಮತ್ತೆ ಸೈಟ್​ಗೆ ಇಂತಿಷ್ಟು ಹಣ ಕಟ್ಟಿಸಿಕೊಳ್ಳಲಾಗುತ್ತೆ
* ನಿವೇಶನ ದರದ ಅರ್ಧದಷ್ಟು ಹಣ ಕಟ್ಟಿಸಿಕೊಂಡು ಉಳಿಕೆ ಮೊತ್ತಕ್ಕೆ ಬ್ಯಾಂಕ್ ಲೋನ್ ಕೊಡಿಸುವ ಆಮಿಷ
* ಹಣ ಪಾವತಿಸಿಕೊಂಡ ಬಳಿಕ ಬಡಾವಣೆ ಅಭಿವೃದ್ಧಿಗೊಳಿಸದೆ ಬೇರೆಡೆ ಹಣ ಹೂಡಿಕೆ ಮಾಡುತ್ತಾರೆ
* ನಿಗದಿತ ಸಮಯದಲ್ಲಿ ಬಡಾವಣೆ ಅಭಿವೃದ್ಧಿಗೊಳಿಸದೆ, ಸಮಯ ಕಳೆದರೂ ನಿವೇಶನ ಹಂಚಿಕೆ ಆಗಲ್ಲ
* ಹಣ ಕಟ್ಟಿದ ಸದಸ್ಯರು ಪ್ರತಿನಿತ್ಯ ಸಂಘದ ಕಚೇರಿಗಳಿಗೆ ಅಲೆದಾಡುವ ಅನಿವಾರ್ಯ ಪರಿಸ್ಥಿತಿ

ಸಂಘಗಳು ಹೇಳುವ ಸಬೂಬು

* ಒಂದೆರಡು ತಿಂಗಳಲ್ಲಿ ಹಂಚಿಕೆ ಮಾಡುತ್ತೇವೆ
* ಸಂಘದ ಹೆಸರಿಗೆ ಜಮೀನು ನೋಂದಣಿ ನಡೆಯುತ್ತಿದೆ
* ಬಡಾವಣೆ ನಿರ್ಮಾಣ ಹಂತದಲ್ಲಿದೆ
* ಕೆಲವು ಪ್ರಾಧಿಕಾರದಿಂದ ಅನುಮತಿ ಬಾಕಿ ಇದೆ
* ಭೂಮಿ ಬೆಲೆ ಹೆಚ್ಚಾಗಿದೆ. ಹೆಚ್ಚಿನ ಹಣ ನೀಡಬೇಕು
* ಸರ್ಕಾರ ನೋಂದಣಿ ಸ್ಥಗಿತಗೊಳಿಸಿದೆ

ಬೆಂಗಳೂರಿನಲ್ಲೇ ಜಾಸ್ತಿ: ರಾಜ್ಯದಲ್ಲಿ ನೋಂದಣಿಯಾಗಿರುವ 1,187 ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ಅತಿ ಹೆಚ್ಚು 402 ಸಹಕಾರ ಸಂಘಗಳು ಬೆಂಗಳೂರು ನಗರ ಜಿಲ್ಲೆಯಲ್ಲಿವೆ. ಮೈಸೂರಿನಲ್ಲಿ 251 ಸಂಘಗಳಿವೆ. ರೇರಾದಲ್ಲಿ ನೋಂದಾಯಿಸಿಕೊಂಡಿರುವ ಸಂಘಗಳಲ್ಲಿ ಬೆಂಗಳೂರು ನಗರ-2, ಬೆಂ.ಗ್ರಾ.-1, ಶಿವಮೊಗ್ಗ, ಮೈಸೂರು ಮತ್ತು ಚಿಕ್ಕಬಳ್ಳಾಪುರದ ತಲಾ ಒಂದು ಸಂಘಗಳಿವೆ.

ಯಾವುದೆಲ್ಲ ದಿವಾಳಿ?: ಸೈಟ್​ನ ಆಸೆಗೆ ತಾವು ಹಣ ಕಟ್ಟಿರುವ ಸಂಘ-ಸಂಸ್ಥೆಗಳು ಯಾವ ವರ್ಗದಲ್ಲಿವೆ? ಯಾವೆಲ್ಲ ಸಂಘಗಳು ಮುಚ್ಚಿವೆ? ಯಾವ ಸಂಘಗಳು ಮುಚ್ಚುವ ಹಂತದಲ್ಲಿವೆ? ಎಂಬ ಪೂರ್ಣ ಮಾಹಿತಿಗಾಗಿ ‘ವಿಜಯವಾಣಿ’ ವೆಬ್​ಸೈಟ್ ನೋಡಿ. 279 ಸ್ಥಗಿತವಾಗಿರುವ ಹಾಗೂ ರೇರಾದಲ್ಲಿ ಅನುಮೋದನೆಯಾಗಿರುವ 6 ಸಂಸ್ಥೆಗಳು ಮಾತ್ರ ರೇರಾ ಅನುಮತಿ ಪಡೆದಿವೆ. 5 ರಿಂದ 10 ವರ್ಷ ಕಳೆದರೂ ನಿವೇಶನ ಹಂಚಿಕೆ ಮಾಡದ 127 ಗೃಹ ನಿರ್ಮಾಣ ಸಹಕಾರ ಸಂಘಗಳ ಸಂಪೂರ್ಣ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಹೂಡಿಕೆದಾರರು ವೆಬ್​ಸೈಟ್​ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಆರಕ್ಕಷ್ಟೇ ರೇರಾ ಸಮ್ಮತಿ: ರಾಜ್ಯದಲ್ಲಿ 1,828 ಗೃಹ ನಿರ್ಮಾಣ ಸಹಕಾರ ಸಂಘಗಳಿದ್ದು, ಇದರಲ್ಲಿ 1,187 ಕಾರ್ಯನಿರತ ಸಂಘಗಳಾಗಿವೆ. ಈ ಪೈಕಿ 279 ಸಂಘ ಸ್ಥಗಿತಗೊಂಡಿವೆ. 362 ಸೊಸೈಟಿಗಳು ಸ್ಥಗಿತದ ದಾರಿಯಲ್ಲಿವೆ. ಉಳಿದಂತೆ 127 ಸಂಘಗಳು ಕಳೆದ 5 ರಿಂದ 10 ವರ್ಷಗಳಿಂದ ನಿವೇಶನ ನೀಡುತ್ತೇವೆ ಎಂದು ಸದಸ್ಯರಿಗೆ ಸಬೂಬು ಹೇಳಿಕೊಂಡೇ ಕಾಲ ಕಳೆಯುತ್ತಿವೆ. ಅಚ್ಚರಿ ವಿಚಾರವೆಂದರೆ 1,828 ಗೃಹ ನಿರ್ಮಾಣ ಸಹಕಾರ ಸಂಘಗಳ ಪೈಕಿ ರೇರಾದಲ್ಲಿ ಬರೀ 6 ಸಂಘಗಳಷ್ಟೇ ನೋಂದಾಯಿಸಿಕೊಂಡಿವೆ.

ಏನು ಮಾಡಬೇಕು?

· ಸದಸ್ಯತ್ವ ಪಡೆಯುವ ಮೊದಲು ಸಂಘ-ಸಂಸ್ಥೆಗಳ ಪೂರ್ವಾಪರ ವಿಚಾರಣೆ ಮಾಡಬೇಕು
· ಈ ಹಿಂದೆ ಮಾಡಿರುವ ಪ್ರಾಜೆಕ್ಟ್​ಗಳ ಮಾಹಿತಿ ಪಡೆಯುವುದು
· ಸಂಘ-ಸಂಸ್ಥೆಯ ಷರತ್ತು- ನಿಬಂಧನೆಗಳನ್ನು ಓದಿಕೊಳ್ಳುವುದು
· ಎಷ್ಟು ದಿನದಲ್ಲಿ ನಿವೇಶನ ಹಂಚಿಕೆ ಮಾಡುತ್ತಾರೆಂದು ಕರಾರು ಮಾಡಿಸಿಕೊಳ್ಳುವುದು
· ಸಂಘದ ಬಗ್ಗೆ ಕಾನೂನು ಅಭಿಪ್ರಾಯ ಪಡೆದುಕೊಳ್ಳುವುದು
· ವಿಳಂಬ ಅಥವಾ ಮೋಸ ಮಾಡಿದರೆ ದೂರು ಪ್ರಾಧಿಕಾರದಲ್ಲಿ ದೂರು ದಾಖಲಿಸುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net