ಮುದ್ರಾ ಯೋಜನೆಯ ಹೆಸರಿನಲ್ಲಿ ವಂಚನೆ

Crime Logo
Published on

ಬೆಂಗಳೂರು: ಮುದ್ರಾ ಯೋಜನೆಯಡಿ ಲೋನ್ ಪಡೆಯಲು ಆನ್‌ಲೈನ್‌ನಲ್ಲಿ ಸರ್ಚ್ ಮಾಡುವವರೇ ಎಚ್ಚರ.
ಪ್ರಧಾನಮಂತ್ರಿ ಮುದ್ರಾ ಯೋಜನೆಯ ಹೆಸರಲ್ಲಿ ಸಾಲ ನೀಡುವುದಾಗಿ ಹೇಳಿ ವಂಚಿಸುವ ಗ್ಯಾಂಗ್ ಸಕ್ರೀಯವಾಗಿದೆ.

ಸೈಬರ್ ವಂಚಕರು ವ್ಯಕ್ತಿಯೊಬ್ಬರಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ(ಪಿಎಂಎಂವೈ)ಯಡಿ ೧೦ ಲಕ್ಷ ರೂ. ಸಾಲ ನೀಡುವುದಾಗಿ ವಿವಿಧ ಶುಲ್ಕಗಳ ನೆಪದಲ್ಲಿ ೧.೬೩ ಲಕ್ಷ ರೂ. ಹಣ ವರ್ಗಾಯಿಸಿಕೊಂಡು ಬಳಿಕ ವಂಚಿಸಿರುವ ಆರೋಪದಡಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹುಳಿಮಾವು ನಿವಾಸಿ ಸಿ.ನಾರಾಯಣಸ್ವಾಮಿ (೪೪) ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾರಾಯಣಸ್ವಾಮಿ ಅವರಿಗೆ ಹಣದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಹುಡುಕಲು ಮುಂದಾಗಿದ್ದಾರೆ. ಈ ವೇಳೆ ಆನ್‌ಲೈನ್‌ನಲ್ಲಿ ಮೊಬೈಲ್ ಸಂಖ್ಯೆಯೊಂದು ಸಿಕ್ಕಿದ್ದು, ಆ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಅಪರಿಚಿತರು ಮುದ್ರಾ ಯೋಜನೆಯಡಿ ೧೦ ಲಕ್ಷ ರೂ. ಸಾಲ ನೀಡುವುದಾಗಿ ನಾರಾಯಣಸ್ವಾಮಿ ಅವರನ್ನು ನಂಬಿಸಿದ್ದಾರೆ. ಬಳಿಕ ನಾರಾಯಣಸ್ವಾಮಿ ಅವರ ವೈಯಕ್ತಿಕ ವಿವರ, ಬ್ಯಾಂಕ್ ಖಾತೆ ವಿವರ ಸೇರಿದಂತೆ ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ.

ಬಳಿಕ ವಂಚಕರು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮತ್ತು ಮುದ್ರಾ ಯೋಜನೆಯ ನಕಲಿ ಲೆಟರ್ ಹೆಡ್ ಬಳಸಿ ನಿಮಗೆ ೧೦ ಲಕ್ಷ ರೂ. ಸಾಲ ಮಂಜೂರಾಗಿದೆ ಎಂದು ನಾರಾಯಣಸ್ವಾಮಿಗೆ ಕಳುಹಿಸಿದ್ದಾರೆ.

ನಕಲಿ ಸಾಲ ಮಂಜೂರಾತಿ ಪತ್ರ ಕೊಟ್ಟರು:
ನಕಲಿ ಅಗ್ರಿಮೆಂಟ್, ನಕಲಿ ಬಾಂಡ್‌ಗಳು ಹಾಗೂ ನಕಲಿ ಸಾಲ ಮಂಜೂರಾತಿ ಪತ್ರಗಳನ್ನು ನಾರಾಯಣಸ್ವಾಮಿಗೆ ಕಳುಹಿಸಿ ನಂಬಿಸಿದ್ದಾರೆ. ಬಳಿಕ ಸಾಲದ ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗಲು ಕೆಲ ಶುಲ್ಕಗಳನ್ನು ಪಾವತಿಸಬೇಕು ಎಂದು ವಿವಿಧ ಹಂತಗಳಲ್ಲಿ ೧.೬೫ ಲಕ್ಷ ರೂ. ಹಣ ಹಾಕಿಸಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಂಚಕರು, ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಈ ವೇಳೆ ಅನುಮಾನಗೊಂಡ ನಾರಾಯಣಸ್ವಾಮಿ ಅವರು ಈಗಾಗಲೇ ಕೊಟ್ಟಿರುವ ಹಣವನ್ನು ವಾಪಾಸ್ ಕೊಡುವಂತೆ ಕೇಳಿದ್ದಾರೆ. ಈ ವೇಳೆ ವಂಚಕರು ತಮ್ಮ ಮೊಬೈಲ್‌ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡು ಸಂಪರ್ಕ ಕಡಿದುಕೊಂಡಿದ್ದಾರೆ. ಆಗ ನಾರಾಯಣಸ್ವಾಮಿಗೆ ತಾನು ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ಅರಿವಿಗೆ ಬಂದಿದೆ. ಬಳಿಕ ಹುಳಿಮಾವು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net