ಸಿಐಎಸ್​ಎಫ್ ಸಿಬ್ಬಂದಿ ಸೋಗಿನಲ್ಲಿ ವಂಚನೆ

Fraud vvani
Published on

ಬೆಂಗಳೂರು: ಹಳೇ ಕಾರು ಮಾರಾಟ ಜಾಲತಾಣದಲ್ಲಿ ಕಾರೊಂದರ ಫೋಟೋ ಅಪ್​ಲೋಡ್ ಮಾಡಿದ ವಂಚಕ, ಅದನ್ನು ಖರೀದಿಸಲು ಇಚ್ಛಿಸಿದ ಗ್ರಾಹಕನಿಂದ 1.35 ಲಕ್ಷ ರೂ. ಪಡೆದು ವಂಚಿಸಿದ್ದಾನೆ.

ಕೊಡಿಗೇಹಳ್ಳಿ ನಿವಾಸಿ ಬ್ಯಾಂಕ್ ಉದ್ಯೋಗಿ ವಿ.ಎಸ್. ವಿದ್ಯಾಸಾಗರ್ ಈ ಬಗ್ಗೆ ದೂರು ನೀಡಿದ್ದಾರೆ. ಈ ಮೇರೆಗೆ ಆರೋಪಿ ಚೇತನ್​ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಕೊಡಿಗೇಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಡಿ.13ರಂದು ‘ಕಾರ್ ಟ್ರೆಂಡ್.ಕಾಂ’ ಎಂಬ ವೆಬ್​ಸೈಟ್​ನಲ್ಲಿ ಕಾರು ಮಾರಾಟಕ್ಕೆ ಇರುವುದನ್ನು ಕಂಡು ವಿದ್ಯಾಸಾಗರ್, ವೆಬ್​ಸೈಟ್​ನಲ್ಲಿನ ಮೊಬೈಲ್ ನಂಬರ್​ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ತನ್ನ ಹೆಸರು ಚೇತನ್​ಕುಮಾರ್. ಸಿಐಎಸ್​ಎಫ್ ಸಿಬ್ಬಂದಿ ಎಂದು ಪರಿಚಯ ಮಾಡಿಕೊಂಡಿದ್ದು, ಕಾರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಿದ್ದೇನೆ. ಮುಖಾಮುಖಿ ಭೇಟಿ ಸಾಧ್ಯವಾಗುವುದಿಲ್ಲ. ವಾಟ್ಸ್ ಆಪ್​ನಲ್ಲಿ ಕಾರಿನ ಫೋಟೋ ಕಳುಹಿಸುತ್ತೇನೆ. ಒಪ್ಪಿದರೆ 2.8 ಲಕ್ಷ ರೂ. ಕೊಡಿ. ನಿಮ್ಮ ಮನೆ ವಿಳಾಸಕ್ಕೆ ಕಾರು ಕಳುಹಿಸುತ್ತೇನೆ ಎಂದು ಹೇಳಿದ್ದಾರೆ. ಅದನ್ನು ನಂಬಿದ ವಿದ್ಯಾಸಾಗರ್, ತನ್ನ ಆಧಾರ್ ಫೋಟೋ ಕಳುಹಿಸಿದ್ದಾರೆ. ಪ್ರತಿಯಾಗಿ ಚೇತನ್​ಕುಮಾರ್, ಮಿಲಿಟರಿಗೆ ಸೇರಿದ ಬಿಲ್ ಕಳುಹಿಸಿ ಜಿಎಸ್​ಟಿ, ರವಾನೆ ವೆಚ್ಚ ಎಲ್ಲ ಸೇರಿಸಿ ಹಣವನ್ನು ಗೂಗಲ್ ಪೇ ಮಾಡಲು ತಿಳಿಸಿದ್ದಾರೆ. ಅದನ್ನು ನಂಬಿದ ವಿದ್ಯಾಸಾಗರ್, ಹಂತಹಂತ ವಾಗಿ ಆತನ ಖಾತೆಗೆ 1.35 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.

ಆದರೆ, ಕಾರು ಕಳುಹಿಸಿಲ್ಲ. ಡಿ.15ರಂದು ಪ್ರದೀಪ್​ಕುಮಾರ್ ಎಂಬಾತ ಕರೆ ಮಾಡಿ ಪೂರ್ಣ ಹಣ ಪಾವತಿ ಮಾಡಿದರೆ ಕಾರು ತಂದು ಕೊಡುವುದಾಗಿ ಹೇಳಿದ್ದಾನೆ. ಅನುಮಾನಗೊಂಡು ಚೇತನ್​ಕುಮಾರ್​ಗೆ ವಿದ್ಯಾಸಾಗರ್, ಕರೆ ಮಾಡಿದಾಗ ಮೊಬೈಲ್ ಆಫ್ ಆಗಿತ್ತು. ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net