ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಪ್ರಕರಣ ದಾಖಲು

surappa (1)
Published on

ಬೆಂಗಳೂರು: ಇಬ್ಬರು ನಟರ ಜತೆ ಹೊಸ ಸಿನಿಮಾ ನಿರ್ಮಾಣಕ್ಕೆಂದು ಲಕ್ಷಾಂತರ ರೂ. ಸಾಲ ಪಡೆದು ಮರಳಿಸದೆ ವಂಚಿಸಿರುವ ಆರೋಪದ ಚಲನಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಮಹಿಳೆಯೊಬ್ಬರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಲಕಾವೇರಿ ಲೇಔಟ್ ನಿವಾಸಿ ಹಾಗೂ ಉದ್ಯಮಿ ಎಚ್.ಜಿ.ಲಕ್ಷ್ಮೀ ಅವರು ವಂಚನೆಗೊಳಗಾದವರು. ನಟರಾದ ಶಿವರಾಜ್ ಕುಮಾರ್ ಹಾಗೂ ಗಣೇಶ್ ಅವರ ನಟನೆ ಹೊಸ ಚಲನಚಿತ್ರ ನಿರ್ಮಿಸುವುದಾಗಿ ನಂಬಿಸಿ ೬೭ ಲಕ್ಷ ರೂ. ಹಣವನ್ನು ಸೂರಪ್ಪ ಬಾಬು ಸಾಲ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಲಕ್ಷ್ಮೀ ಅವರು ನೀಡಿದ ದೂರಿನ ಮೇರೆಗೆ ಸೂರಪ್ಪ ಬಾಬು ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

೨೫ ಲಕ್ಷ ರೂ.ಮಾತ್ರ ಹಿಂದಿರುಗಿಸಿರು ನಿರ್ಮಾಪಕ:

ತಲಕಾವೇರಿ ಲೇಔಟ್‌ನ ನಿವಾಸಿಯಾದ ಲಕ್ಷ್ಮೀ ಅವರು, ಚಲನಚಿತ್ರ ನಿರ್ಮಾಣ ಜತೆ ಲೇವಾದೇವಿ ವ್ಯವಹಾರ ಸಹ ನಡೆಸುತ್ತಾರೆ. ಕೆಲ ತಿಂಗಳ ಹಿಂದೆ ಅವರಿಗೆ ಸೂರಪ್ಪ ಬಾಬು ಪರಿಚಯವಾಗಿದೆ. ಎರಡೂವರೆ ವರ್ಷಗಳ ಹಿಂದೆ ನಮ್ಮ ಮನೆಗೆ ಸೂರಪ್ಪ ಬಾಬು ಭೇಟಿ ನೀಡಿದ್ದರು. ಆಗ ನಟರಾದ ಶಿವರಾಜ್ ಕುಮಾರ್ ಹಾಗೂ ಗಣೇಶ್ ಅವರ ನಟನೆಯಲ್ಲಿ ಕೆ.ಎಸ್.ರವಿಕುಮಾರ್ ಅವರ ನಿರ್ದೇಶನದಲ್ಲಿ ಪ್ರೋಡಕ್ಷನ್ ೦೬ ಹೆಸರಿನಲ್ಲಿ ಹೊಸ ಸಿನಿಮಾ ನಿರ್ಮಿಸುತ್ತಿದ್ದೇನೆ. ಇದಕ್ಕೆ ಸಾಲ ರೂಪದಲ್ಲಿ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಹಂತ ಹಂತವಾಗಿ ೯೨.೫೦ ಲಕ್ಷ ರೂ.ಅವರಿಗೆ ಸಾಲ ನೀಡಲಾಯಿತು. ಆದರೆ ಪೂರ್ವ ಒಪ್ಪಂದಂತೆ ಸಾಲದ ಪೈಕಿ ೨೫ ಲಕ್ಷ ಮಾತ್ರ ಹಿಂದಿರುಗಿಸಿ ಸಕಾಲಕ್ಕೆ ಮರಳಿಸಿದರು. ಇನ್ನುಳಿದ ಹಣವನ್ನು ಮರಳಿಸದೆ ಅವರು ವಂಚಿಸಿದ್ದಾರೆ ಎಂದು ಲಕ್ಷ್ಮೀ ಆರೋಪಿಸಿದ್ದಾರೆ.

ಈ ಸಾಲದ ಸಂಬಂಧ ಪರಸ್ಪರ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸಾಲ ಹಣ ಕೊಡಲು ಹಿಂದೇಟು ಹಾಕಿದಾಗ ಚಲನಚಿತ್ರದ ಬಗ್ಗೆ ವಿಚಾರಿಸಿದಾಗ ನಟರಾದ ಶಿವರಾಜ್ ಕುಮಾರ್ ಮತ್ತು ಗಣೇಶ್ ಅವರ ನಟನೆಯಲ್ಲಿ ಸೂರಪ್ಪ ಬಾಬು ಯಾವುದೇ ಚಿತ್ರ ನಿರ್ಮಿಸುತ್ತಿಲ್ಲ ಎಂಬುದು ಗೊತ್ತಾಯಿತು. ಬಳಿಕ ಹಣ ಕೇಳಿದಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಲಕ್ಷ್ಮೀ ಗಂಭೀರ ಆರೋಪ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net