

ಬೆಂಗಳೂರು: ನಗರದ ವಿವಿಧೆಡೆ ಖಾಲಿ ನಿವೇಶನಗಳನ್ನು ಗುರುತಿಸಿ ನಕಲಿ ದಾಖಲೆ ಸೃಷ್ಟಿಸಿ ವಿವಿಧ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರು. ಸಾಲ ಪಡೆದು ವಂಚಿಸಿ ಕಳೆದ ೧೦ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶೇಷಾದ್ರಿಪುರ ಠಾಣೆ ಪೊಲಿಸರು ಬಂಧಿಸಿದ್ದಾರೆ.
ಲಗ್ಗೆರೆ ನಿವಾಸಿ ಕೃಷ್ಣಕುಮಾರ್ (೩೯) ಬಂಧಿತ. ಆರೋಪಿ ತನ್ನದೇ ತಂಡ ಕಟ್ಟಿಕೊಂಡು ನಗರದ ವಿವಿಧೆಡೆ ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಖರೀದಿಸುವ ನೆಪದಲ್ಲಿ ಬ್ಯಾಂಕ್‌ಗಳಿಂದ ಕೋಟ್ಯಂತರ ರೂ. ಸಾಲ ಪಡೆದು ಬಳಿಕ ಇಎಂಐ ಕಟ್ಟದೆ ವಂಚಿಸಿದ್ದರು. ಈ ಸಂಬಂಧ ನಗರದ ವಿವಿಧ ೯ ಪೊಲೀಸ್ ಠಾಣೆಗಳಲ್ಲಿ ೧೫ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಶೇಷಾದ್ರಿಪುರ ಠಾಣೆ ಪೊಲೀಸರು ಈ ಹಿಂದೆ ಲೋಕೇಶ್, ಆಯೂಬ್, ನಾಗರಾಜ್ ಸೇರಿ ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ತಂಡದ ಮುಖ್ಯ ಕೃಷ್ಣಕುಮಾರ್ ಕಳೆದ ೧೦ ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಇದೀಗ ಶೇಷಾದ್ರಿಪುರ ಠಾಣೆ ಇನ್‌ಸ್ಪೆಕ್ಟರ್ ಹೇಮಂತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೧೫ ರಿಂದ ೨೦ ಕೋಟಿ ರೂ. ವಂಚನೆ
ಆರೋಪಿ ಕೃಷ್ಣಕುಮಾರ್ ಹಾಗೂ ಆತನ ಸಹಚರರು ನಗರದಲ್ಲಿ ಖಾಲಿ ಇರುವ ನಿವೇಶನಗಳನ್ನು ಗುರುತಿಸಿ, ನಂತರ ಆ ಖಾಲಿ ನಿವೇಶನಗಳ ಮಾಲೀಕರು ತಾವೇ ಎಂಬಂತೆ ದಾಖಲೆ ಸೃಷ್ಟಿಸುತ್ತಿದ್ದರು. ತಮ್ಮ ತಂಡದ ಸದಸ್ಯರೇ ಆ ನಿವೇಶನ ಖರೀದಿಸುವ ನೆಪದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಸಾಲಕ್ಕೆ ಅರ್ಜಿ ಹಾಕುತ್ತಿದ್ದರು. ತಾವು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಬ್ಯಾಂಕ್ ಪ್ರತಿನಿಧಿಗಳಿಗೆ ಬಾಡಿಗೆ ಮನೆಯ ವಿಳಾಸ ನೀಡುತ್ತಿದ್ದರು. ನಕಲಿ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುತ್ತಿದ್ದರು. ನಿವೇಶನಗಳಿಗೆ ನಕಲಿ ದಾಖಲೆಗಳನ್ನೇ ಅಸಲಿ ದಾಖಲೆ ಎಂಬಂತೆ ಬ್ಯಾಂಕ್‌ಗೆ ಸಲ್ಲಿಸಿ ಕೋಟ್ಯಂತರ ರೂ. ಸಾಲ ಪಡೆಯುತ್ತಿದ್ದರು. ಬಳಿಕ ಬ್ಯಾಂಕ್‌ಗೆ ಇಎಂಐ ಪಾವತಿಸದೆ ವಂಚಿಸುತ್ತಿದ್ದರು. ಬ್ಯಾಂಕ್ ಪ್ರತಿನಿಧಿಗಳು ಸಾಲ ವಸೂಲಿಗೆ ಮನೆ ಬಳಿಗೆ ತೆರಳಿದರೆ ಆ ಬಾಡಿಗೆ ಮನೆ ಖಾಲಿ ಮಾಡಿಕೊಂಡು ಹೋಗಿರುತ್ತಿದ್ದರು. ಹೀಗೆ ಈ ವಂಚಕರ ತಂಡ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು ೧೫-೨೦ ಕೋಟಿ ರೂ. ಸಾಲ ಪಡೆದು ಇಎಂಐ ಪಾವತಿಸದೆ ವಂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸಲಿ ಹೆಸರು ಬಳಸದ ಆರೋಪಿಗಳು:
ಈ ವಂಚಕರ ತಂಡದ ಸೂತ್ರದಾರ ಆರೋಪಿ ಕೃಷ್ಣಕುಮಾರ್‌ನಾಗಿದ್ದಾನೆ. ಎಲ್ಲಿಯೂ ತಂಡದ ಸದಸ್ಯರ ಅಸಲಿ ಹೆಸರು ಬಳಸದೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಆರೋಪಿಯ ಅಣತಿಯಂತೆ ಇತರೆ ಸದಸ್ಯರು ನಟಿಸುತ್ತಿದ್ದರು. ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾದ ಬಳಿಕ ಆ ಹಣವನ್ನು ಡ್ರಾ ಮಾಡಿಕೊಂಡು ತಂಡದ ಸದಸ್ಯರಿಗೆ ಹಂಚಿ ತಾನು ದೊಡ್ಡ ಪಾಲು ಪಡೆಯುತ್ತಿದ್ದ. ಆರೋಪಿಯು ೨೦೧೩ರಿಂದಲೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದನು.