

ನವದೆಹಲಿ: ಜಾಗತಿಕ ಮಹಾಮಾರಿ ಕರೊನಾ ವಿರುದ್ಧ ಯುದ್ಧ ಘೊಷಣೆ ಮಾಡಿದ್ದ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಈಗ ಮೌನವಾಗಿದ್ದಾರೆ. ಯುದ್ಧ ಗೆಲ್ಲಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಮರ ಸೇನಾನಿಗಳು ಸರಿಯಾದ ಶಸ್ತ್ರಾಸ್ತ್ರಗಳಿಲ್ಲದೆ ಬಳಲಿದ್ದಾರೆ. ಅರ್ಥಾತ್ ಕರೊನಾ ಕೇಸ್ಗಳ ನಿರ್ವಹಣೆಗೆ ಬೇಕಾಗಿರುವ ಆರೋಗ್ಯ ಸಾಮಗ್ರಿಗಳಿಲ್ಲದೆ ದೇಶ ಪರದಾಡುತ್ತಿದೆ. ಅದಕ್ಕಾಗಿ ವಿದೇಶಗಳನ್ನು ಅವಲಂಬಿಸಿದೆ. ಸಕಾಲದಲ್ಲಿ ಜನರಿಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಎಂಬ ವ್ಯಾಪಕ ಟೀಕೆಗೆ ಸರ್ಕಾರ ಗುರಿಯಾಗಿದೆ.
ಕರೊನಾ ಕೇಸುಗಳ ಪಟ್ಟಿಯಲ್ಲಿ ಫ್ರಾನ್ಸ್ಗೆ ಜಾಗತಿಕವಾಗಿ 7ನೇ ಸ್ಥಾನ. ಈವರೆಗೆ ದೇಶದಲ್ಲಿ 1.80 ಲಕ್ಷ ಪ್ರಕರಣಗಳು ವರದಿಯಾಗಿದ್ದು, 28,239 ಮಂದಿ ಮೃತಪಟ್ಟಿದ್ದಾರೆ. 61 ಸಾವಿರ ಮಂದಿ ಗುಣಮುಖರಾಗಿದ್ದರೂ, 90 ಸಾವಿರದಷ್ಟು ಕೇಸು ಇನ್ನೂ ಸಕ್ರಿಯವಾಗಿವೆ. ಕರೊನಾ ನಿರ್ವಹಣೆಗೆ ಅಗತ್ಯವಿರುವ ಔಷಧ ಸಾಮಗ್ರಿಗಳಿಗೆ ವಿದೇಶಿ ಕಾರ್ಖಾನೆಗಳ ಮೇಲೆ ಅವಲಂಬಿತವಾಗಿರುವ ಫ್ರಾನ್ಸ್ಗೆ ಫೇಸ್ ಮಾಸ್ಕ್, ಪರೀಕ್ಷಾ ಕಿಟ್, ವೆಂಟಿಲೇಟರ್, ಥರ್ವಮೀಟರ್, ಜ್ವರ ಕಡಿಮೆ ಮಾಡುವ ಔಷಧಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ನಡುವೆ, ಲಾಕ್ಡೌನ್ ದಿನಗಳಲ್ಲಿ ಜಾರಿ ಮಾಡಿದ್ದ ಕಠಿಣ ನಿಯಮಗಳನ್ನೂ ಸಡಿಲಗೊಳಿಸಲಾಗುತ್ತಿದೆ.
ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸಲು ಫೇಸ್ ಮಾಸ್ಕ್ ಅನಿವಾರ್ಯವೆಂದು ಫ್ರಾನ್ಸ್ ಬಹಳ ಹಿಂದೆಯೇ ಗುರುತಿಸಿತ್ತು. ಆದರೆ ಕಳೆದ ದಶಕದಲ್ಲಿ, ಮುಖ್ಯವಾಗಿ ಹಣಕಾಸು ಕಾರಣಗಳಿಗಾಗಿ ಸರ್ಕಾರವು ಅವುಗಳನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸಿತ್ತು. ಅದೇ ವೇಳೆ ದೇಶೀಯ ಉತ್ಪಾದನೆ ಕುಸಿದಿದ್ದಲ್ಲದೆ ಔಷಧ ಉದ್ಯಮಗಳೂ ವಿದೇಶದತ್ತ ಮುಖ ಮಾಡಿದವು.
‘ಬೃಹತ್ ಪ್ರಮಾಣದ ಔಷಧೋಪಕರಣಗಳ ದಾಸ್ತಾನು ಈಗ ಅಗತ್ಯವಿಲ್ಲ ಎನ್ನುವುದು ನಮ್ಮ ಅಭಿಪ್ರಾಯ. ಈಗಿರುವ ಉತ್ಪಾದನಾ ಘಟಕಗಳು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಸಮರ್ಥವಾಗಿವೆ’ ಎಂದು ಆರೋಗ್ಯ ಸಚಿವ ಆಲಿವಿಯರ್ ವೆರಾನ್ ಕಳೆದ ಮಾರ್ಚ್ನಲ್ಲಿ ತಿಳಿಸಿದ್ದರು. ಆದರೆ ಕರೊನಾ ವೈರಾಣುವಿನ ವ್ಯಾಪ್ತಿ ಮತ್ತು ವೇಗವು ಆ ತರ್ಕವನ್ನು ತಳ್ಳಿಹಾಕಿತು. ಫೇಸ್ ಮಾಸ್ಕ್ಗಳ ತಯಾರಿಕೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಚೀನಾಕ್ಕೆ ವಿದೇಶಗಳಿಂದ ಬಂದ ಭಾರಿ ಪ್ರಮಾಣದ ಮಾಸ್ಕ್ಗಳ ಬೇಡಿಕೆಯನ್ನು ನಿರ್ವಹಿಸುವುದೇ ಕಷ್ಟಸಾಧ್ಯವಾಯಿತು. ಔಷಧೋತ್ಪನ್ನಗಳ ಪ್ರಮುಖ ರಫ್ತುದಾರ ಭಾರತವೂ ಕೊರತೆಯ ಭಯದಿಂದಾಗಿ ರಫ್ತುಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿತು. ಜಾಗತಿಕ ಪೂರೈಕೆ ಸರಪಳಿ ನಿಷ್ಕ್ರಿಯಗೊಳ್ಳುತ್ತಿದ್ದರಿಂದ ಚೀನಾ ಮತ್ತು ಇತರೆಡೆಗಳಿಂದ ನೇರವಾಗಿ ಔಷಧೋತ್ಪನ್ನಗಳನ್ನು ಖರೀದಿಸಲು ಫ್ರೆಂಚ್ ಸರ್ಕಾರ ಪರದಾಡಿತು. ಈ ವಿಳಂಬ ಪ್ರಕ್ರಿಯೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಿತು. ಕೊನೆಗೂ ಹೇಗೋ ಕಷ್ಟಪಟ್ಟು ಚೀನಾದಿಂದ ಮಾಸ್ಕ್ಗಳನ್ನು ತರಿಸಿಕೊಳ್ಳಲಾಯಿತು. ಬಹುಶಃ ಇದೇ ಕಾರಣಕ್ಕೆ ಫ್ರಾನ್ಸ್ನಲ್ಲಿ ಕರೊನಾ ಸಾವಿನ ಪ್ರಮಾಣ ನಿರೀಕ್ಷೆಗಿಂತ ಹೆಚ್ಚೇ ಇದೆ. ಅಮೆರಿಕಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಶೇ.60 ಹೆಚ್ಚು ಎನ್ನುವುದು ನಿಜಕ್ಕೂ ಆತಂಕಕಾರಿ. ಯೂರೋಪಿಯನ್ ಒಕ್ಕೂಟದಲ್ಲಿ ಫ್ರಾನ್ಸ್ಗೆ ಪ್ರತಿಸ್ಪರ್ಧಿಯಾಗಿರುವ ಜರ್ಮನಿ ಸಾವಿನ ಪ್ರಮಾಣ ತಗ್ಗಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಒಂದರ್ಥದಲ್ಲಿ ಫ್ರಾನ್ಸ್ ತನ್ನ ಅತಿ ಆತ್ಮವಿಶ್ವಾಸಕ್ಕೆ ತಕ್ಕ ಬೆಲೆ ತೆರುತ್ತಿದೆ. ಈಚೆಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಅಧ್ಯಕ್ಷ ಮ್ಯಾಕ್ರನ್, ಫ್ರಾನ್ಸ್ನ ಕೃಷಿ, ಆರೋಗ್ಯ, ಕೈಗಾರಿಕಾ ಮತ್ತು ತಾಂತ್ರಿಕ ಸ್ವಾತಂತ್ರ್ಯವನ್ನು ಪುನರ್ ನಿರ್ವಿುಸಬೇಕಾಗಿದೆ ಎಂದಿದ್ದಾರೆ. ದೇಶ ಎಡವಿದ್ದೆಲ್ಲಿ ಎಂಬುದಕ್ಕೆ ಅವರ ಮಾತಿನಲ್ಲೇ ಉತ್ತರವಿದೆ.
ಡಿಸೆಂಬರ್ನಲ್ಲೇ ಮೊದಲ ಕೇಸು
ಡಿಸೆಂಬರ್ 27ರಂದೇ ಪ್ಯಾರಿಸ್ನಲ್ಲಿ ವ್ಯಕ್ತಿಯೊಬ್ಬರಿಗೆ ನ್ಯುಮೋನಿಯಾ ಬಾಧಿಸಿತ್ತು. ವಾಸ್ತವದಲ್ಲಿ ಅವರಿಗೆ ಕರೊನಾ ಸೋಂಕುಗಳಿದ್ದವು ಮತ್ತು ಆಗಲೇ ದೇಶದಲ್ಲಿ ಕರೊನಾ ಕೇಸುಗಳು ಕಂಡುಬಂದಿದ್ದವು ಎಂದು ಪ್ಯಾರಿಸ್ ಬಳಿಯ ಅವಿಸಿನ್ ಆಂಡ್ ಜೀನ್ ವರ್ಡಿಯರ್ ಹಾಸ್ಪಿಟಲ್ನ ಎಮರ್ಜೆನ್ಸಿ ವಿಭಾಗದ ಮುಖ್ಯಸ್ಥ ಯ್ವೆಸ್ ಕೋಹೆನ್ ಹೇಳಿದ್ದಾರೆ. ‘ನ್ಯುಮೋನಿಯಾ ಪ್ರಕರಣ ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ, 43 ವರ್ಷದ ಆ ವ್ಯಕ್ತಿಯಲ್ಲಿ ಒಣಕೆಮ್ಮು, ಜ್ವರ ಮತ್ತು ಉಸಿರಾಟದ ಸಮಸ್ಯೆಯಿತ್ತು’ ಎಂದು ಕೋಹೆನ್ ತಿಳಿಸಿದ್ದಾರೆ. ವುಹಾನ್ನಲ್ಲಿ ಅಪರಿಚಿತ ಲಕ್ಷಣಗಳುಳ್ಳ ನ್ಯುಮೋನಿಯಾ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೊಷಣೆ ಮಾಡಿದ್ದ ನಾಲ್ಕು ದಿನಗಳ ಬಳಿಕ ಪ್ಯಾರಿಸ್ನಲ್ಲಿ ಈ ಪ್ರಕರಣ ದಾಖಲಾಗಿತ್ತು. ಆತನ ಪತ್ನಿ ಚಾರ್ಲ್ಸ್ ಡಿ ಗಾಲ್ ಏರ್ಪೋರ್ಟ್ನ ಸೂಪರ್ ಮಾರ್ಕೆಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿ ವಿದೇಶಿ ಪ್ರಯಾಣಿಕರ ಸಂಪರ್ಕದಿಂದ ಕರೊನಾ ಹರಡಿರಬಹುದು ಎಂದು ಊಹಿಸಲಾಗಿದೆ.