

ಬೆಂಗಳೂರು: ರಾಮೋಹಳ್ಳಿಯಲ್ಲಿ ಶನಿವಾರ ರಾತ್ರಿ ಟಿಪ್ಪರ್ ಲಾರಿ ಹರಿದು ನಾಲ್ಕು ವರ್ಷದ ಮಗು ಮೃತಪಟ್ಟಿದ್ದು, ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿ ಮೇಲೆ ಕಲ್ಲು ತೂರಾಟ ನಡೆಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಉತ್ತರಪ್ರದೇಶ ಮೂಲದ ಅಮರನಾಥ್ ಮತ್ತು ಪೂಜಾ ದಂಪತಿಯ ಮಗು ಆಯುಷ್ ಚೌಹಾಣ್(೪) ಮೃತಪಟ್ಟಿದೆ. ಪತ್ನಿ ಮತ್ತು ಮಕ್ಕಳೊಂದಿಗೆ ರಾಮೋಹಳ್ಳಿಯಲ್ಲಿ ವಾಸವಾಗಿರುವ ಅಮರನಾಥ್, ಪ್ಲಂಬಿಂಗ್ ಕೆಲಸ ಮಾಡುತ್ತಾರೆ. ಅಮರನಾಥ್ ದಂಪತಿಯು ಅಗತ್ಯ ವಸ್ತುಗಳ ಖರೀದಿಗಾಗಿ ರಾತ್ರಿ ರಾಮೋಹಳ್ಳಿ ಬಸ್ ನಿಲ್ದಾಣದ ಬಳಿ ಬಂದಿದ್ದಾಗ ಈ ದುರ್ಘಟನೆ ನಡೆದಿದೆ.
ಅಮರನಾಥ್, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮೊಬೈಲ್ ಅಂಗಡಿಯಲ್ಲಿ ಬಿಟ್ಟು ರಸ್ತೆಯ ಮತ್ತೊಂದು ಬದಿಯ ಅಂಗಡಿಗೆ ಹೋಗಿದ್ದರು. ಆಗ ಮಗು ಆಯುಷ್ ಚೌಹಾಣ್ ತಾಯಿಯಿಂದ ಕೈ ಬಿಡಿಸಿಕೊಂಡು ರಸ್ತೆಯ ಮತ್ತೊಂದು ಬದಿಯಲ್ಲಿದ್ದ ತಂದೆ ಅಮರನಾಥ್‌ರತ್ತ ಓಡಿ ಹೋಗಲು ಮುಂದಾಗಿದೆ. ಅದೇ ವೇಳೆಗೆ ವೇಗವಾಗಿ ಬಂದ ಲಾರಿ ಮಗುವಿನ ಮೇಲೆ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗುವಿನ ದೇಹ ಛಿದ್ರ ಛಿದ್ರ:
ಮಗುವಿನ ಮೇಲೆ ಲಾರಿ ಪರಿಣಾಮ ಮಗುವಿನ ತಲೆ ಮತ್ತು ದೇಹ ಛಿದ್ರ ಛಿದ್ರವಾಗಿದೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗುವಿನ ಸಾವಿನಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಯ ಮೇಲೆ ಕಲ್ಲು ತೂರಿ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಅಲ್ಲದೆ, ಚಾಲಕನನ್ನು ವಾಹನದಿಂದ ಕೆಳಗೆ ಎಳೆದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಾಲಕನನ್ನು ಬಂಧಿಸಿ, ಲಾರಿ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಂಬಳಗೋಡು ಠಾಣೆಯಲ್ಲಿ ದೂರು ದಾಖಲಾಗಿದೆ.