ನಾಲ್ವರು ಕಳ್ಳರ ಬಂಧನ : 1.91 ಲಕ್ಷ ರೂ. ಮೌಲ್ಯದ ವಾಹನ ಜಪ್ತಿ

arrest-new15384158611634987641
Published on

ಬೆಂಗಳೂರು: ನಗರದ ವಿವಿಧೆಡೆ ರಾತ್ರಿ ವೇಳೆ ಮನೆಗಳವು ಮತ್ತು ವಾಹನ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿಲೇಔಟ್‌ನ ಇಲಿಯಾಸ್ ನಗರದ ಇಮ್ರಾನ್ ಪಾಷಾ(೨೭), ಮಂಗಮ್ಮನಪಾಳ್ಯದ ಹಿದಾಯತ್(೨೫), ಜೆ.ಪಿ.ನಗರದ ಕನಕನಗರದ ನಾಸೀರ್(೨೮) ಹಾಗೂ ಸೈಯದ್ ಜುಬೇರ್ ಅಲಿಯಾಸ್ ಸುಬ್ಬಿ (೨೧) ಬಂಧಿತರು. ಆರೋಪಿಗಳಿಂದ 1.91 ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನ, ೨ ಪ್ಯಾಸೆಂಜರ್ ಆಟೋ, ಎರಡು ಎಚ್‌ಪಿ ಗ್ಯಾಸ್ ಸಿಲಿಂಡರ್‌ಗಳು ಹಾಗೂ ೧೩ ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕೆಂಗೇರಿಯ ಮೈಲಸಂದ್ರದ ಮೂಕಾಂಬಿಕಾ ಲೇಔಟ್‌ನಲ್ಲಿ ಚೇತನ್ ಎಂಬುವವರು ಸ್ನೇಹಿತ ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಅಪರಾಧ ಹಿನ್ನೆಲೆವುಳ್ಳವರಾಗಿದ್ದು, ಮೋಜು ಜೀವನಕ್ಕೆ ಸುಲಭವಾಗಿ ಹಣ ಹೊಂದಿಸುವ ಸಲುವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ಈ ಹಿಂದೆ ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದು ಕಳವು ಪ್ರಕರಣಗಳಲ್ಲಿ ತೊಡಗಿದ್ದರು. ರಾತ್ರಿ ವೇಳೆ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳನ್ನು ಕಳವು ಮಾಡಿ ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಬಳಿಕ ಆ ಹಣವನ್ನು ಹಂಚಿಕೊಂಡು ತಮ್ಮ ದುಶ್ಚಟಗಳಿಗೆ ಬಳಸಿಕೊಂಡು ವ್ಯಯಿಸುತ್ತಿದ್ದರು. ಅಲ್ಲದೇ ರಾತ್ರಿ ವೇಳೆ ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಕೆಂಗೇರಿ ಠಾಣೆಯಲ್ಲಿ ದಾಖಲಾಗಿದ್ದ ಏಳು ಪ್ರಕರಣಗಳು, ಚಾಮರಾಜಪೇಟೆ, ಬಂಡೇಪಾಳ್ಯ, ಬನಶಂಕರಿ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಪ್ರಕರಣಗಳು ಸೇರಿ ಒಟ್ಟು ೯ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net