ನಾಲ್ಕು ಜನಪರ ಕಾರ್ಯಕ್ರಮಗಳು ಏಕಕಾಲಕ್ಕೆ ಸೋಮವಾರ ಅನುಷ್ಠಾನ

VidhanaSoudha
Published on

ಬೆಂಗಳೂರು: ಆಧುನಿಕ ತಂತ್ರಜ್ಞಾನದ ಲಭ್ಯತೆ ವೈಯಕ್ತಿಕ, ಸಾಮೂಹಿಕ, ಸಾಂಸ್ಥಿಕ ವಿನಿಯೋಗದಲ್ಲಿ ಪೈಪೋಟಿ ಏರ್ಪಟ್ಟಿದೆ. ಜನಸ್ನೇಹಿ ಆಡಳಿತ ಸಾಧ್ಯವಾಗಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ತಾಲೂಕಿನ ಉಪನೋಂದಣಾಧಿಕಾರಿ ಮರ್ಜಿಗೆ ಕಾಯದೆ ಆಯಾ ಜಿಲ್ಲೆ ವ್ಯಾಪ್ತಿಯ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ (ಎನಿವೇರ್) ಆಸ್ತಿಗಳ ನೋಂದಣಿಗೆ ಅವಕಾಶ ಆಗು ಮಾಡಿದ್ದು, ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸೆ.2ರಿಂದ ಈ ವ್ಯವಸ್ಥೆ ಜನರ ಕೈಗೆ ಎಟುಕಲಿದ್ದು, ಈ ಕುರಿತು ಆದೇಶ ಹೊರ ಬಿದ್ದಿದೆ.

ಯಾರದೋ ಆಸ್ತಿಯನ್ನು ಮತ್ಯಾರೋ ನಕಲಿ ದಾಖಲೆಗಳ ಮೂಲಕ ಕಬಳಿಕೆ, ಮತ್ಯಾರಿಗೆ ಮಾರಾಟ ಮಾಡಿ ಟೋಪಿ ಹಾಕುವ ವ್ಯವಸ್ಥಿತ ಮೋಸದ ದಂಧೆ ಜಾಲಕ್ಕೆ ಕಡಿವಾಣ ಬೀಳಲಿದೆ.

ಇನ್ನು ಮುಂದೆ ಸ್ಥಿರಾಸ್ತಿ ನೋಂದಣಿ ವೇಳೆ ಪಹಣಿಯೊಂದಿಗೆ ವೈಯಕ್ತಿಕ ಗುರುತಿಗಾಗಿ ಆಧಾರ್ ಸಂಖ್ಯೆ ಅಥವಾ ಪಾಸ್‌ಪೋರ್ಟ್ ಇಲ್ಲವೇ ಪ್ಯಾನ್‌ಕಾರ್ಡ್ ಪ್ರಗತಿ ಲಗತ್ತು ಕಡ್ಡಾಯವಾಗಿದೆ. ಇದು ಕೂಡ ಸೆ.2ರಿಂದ ಅನುಷ್ಠಾನಕ್ಕೆ ಬರಲಿದ್ದು, ಸುತ್ತೋಲೆ ಹೊರಬಿದ್ದಿದೆ.

ಕಾವೇರಿ 2.0 ತಂತ್ರಾಂಶದ ನ್ಯೂನತೆಗಳನ್ನು ಸರಿಪಡಿಸಲಾಗಿದೆ. ಆನ್‌ಲೈನ್ ಮುಖೇನ ಕಾಲಾವಕಾಶ ಕಾದಿರಿಸಿಕೊಂಡು ಆಸ್ತಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಒತ್ತುವರಿ ತೆರವಿಗೆ ಕ್ರಮ

‘ಲ್ಯಾಂಡ್ ಬೀಟ್’ ಆ್ಯಪ್ ಮೂಲಕ ಕಂದಾಯ ಸೇರಿ ವಿವಿಧ ಇಲಾಖೆಗಳ 1.1 ಕೋಟಿ ಎಕರೆ ವಿಸ್ತೀರ್ಣದ 14.1 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದೆ. ಈ ಪೈಕಿ 26 ಲಕ್ಷ ಎಕರೆ ಕಂದಾಯ ಇಲಾಖೆಗೆ ಸೇರಿದ್ದಾಗಿದೆ.

ಗ್ರಾಮ ಆಡಳಿತಾಧಿಕಾರಿಗಳು ಕ್ಷೇತ್ರ ಕಾರ್ಯದ ಮುಖೇನ ಗುರುತಿಸಿದ ಕಂದಾಯ ಜಮೀನಿನಲ್ಲಿ 13.7 ಲಕ್ಷ ಎಕರೆ ಒತ್ತುವರಿಯಾಗಿದೆ. ಇದರಲ್ಲಿ ಅರ್ಜಿ ನಮೂನೆ 50, 53 ಮತ್ತು 57ರಡಿ ಸಲ್ಲಿಸಿದ 10 ಲಕ್ಷಕ್ಕೂ ಹೆಚ್ಚು ಅರ್ಜಿಗಳಿಗೆ ಸಂಬಂಧಿಸಿದ್ದೂ ಒಳಗೊಂಡಿದೆ.

ಒತ್ತುವರಿ ತೆರವು ಕಾರ್ಯಾಚರಣೆ ಸೋಮವಾರ ಶುರುವಾಗಲಿದೆ. ಈ ವೇಳೆ ಅಸಲಿ ಬಗರ್‌ಹುಕುಂ ಸಾಗುವಳಿದಾರರು, ಒತ್ತುವರಿ ಪ್ರಮಾಣವೆಷ್ಟು ಎಂದು ಗೊತ್ತಾಗಲಿದೆ. ಜಿಯೋ ೆನ್ಸಿಂಗ್ ಮೂಲಕ ಆಸ್ತಿಗಳ ಸಂರಕ್ಷಣೆ ಜತೆಗೆ ಒತ್ತುವರಿ ತೆರವು ಅಪ್‌ಡೇಟ್‌ಗೆ ಡ್ಯಾಶ್ ಬೋರ್ಡ್ ವ್ಯವಸ್ಥೆಯಾಗಲಿದೆ. ವಿಶೇಷ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ.

ಹಾಗೆಯೇ ಪೋಡಿ ದುರಸ್ತಿಯು ಅಭಿಯಾನ ಮಾದರಿಯಲ್ಲಿ ಸೋಮವಾರ ಆರಂಭವಾಗಲಿದೆ. ಅಕ್ರಮ ಸಕ್ರಮದಡಿ ಭೂಮಿ ಮಂಜೂರು ಮಾಡಿಕೊಂಡ 10 ಲಕ್ಷ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.

ನಮೂನೆ 1-5 ಪೋಡಿ ದುರಸ್ತಿಗೆ ಡಿಜಿಟಲ್ ಆ್ಯಪ್ ಬಳಸಿಕೊಳ್ಳಲಾಗುತ್ತಿದೆ. ಡಿಜಿಟಲ್ ಕಡತಗಳ ಸ್ವಯಂ ತಯಾರಾಗಲಿದ್ದು, ರೈತರ ಅರ್ಜಿಗೆ ಕಾಯುವ ಅಗತ್ಯವಿಲ್ಲವೆಂಬ ಸ್ಪಷ್ಟ ಸೂಚನೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ರವಾನೆಯಿದೆ.

ಡಿಜಿಟಲ್ ಕಡತ 1-5 ನಮೂನೆ ತಯಾರಾದ ಬಳಿಕ ಮುಂದೆ 6-10 ಮಾಡಿ ಅಂತಹವರಿಗೆ ಸಮೀಕ್ಷೆಯೊಂದಿಗೆ ದುರಸ್ತಿ ಮಾಡಿದ ನಂತರ ಹೊಸ ಸರ್ವೆ ನಂಬರ್ ಪಹಣಿಯಲ್ಲಿ ದಾಖಲೆ ಮಾಡಿಕೊಳ್ಳಲಾಗುತ್ತದೆ.

ಪ್ರಾಯೋಗಿಕವಾಗಿ 1-5 ನಮೂನೆ ಡಿಜಿಟಲ್ ಕಡತ ತಯಾರಿಯನ್ನು ಹಾಸನ ಜಿಲ್ಲೆಯಲ್ಲಿ ಜಾರಿಗೆ ತಂದು ಯಶಸ್ವಿಗೊಳಿಸಿದ್ದು, ಪೋಡಿ ದುರಸ್ತಿ ಹಾಗೂ ಡಿಜಿಟಲ್ ಕಡತ ತಯಾರಿಯು ರಾಜ್ಯಾದ್ಯಂತ ವಿಸ್ತರಣೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net