ಡ್ರಗ್ ಸೇವನೆಯಿಂದ ನಾಲ್ವರ ಮರಣ

Drugs
Published on

ಫಿರೋಜ್​ಪುರ: ಪಂಜಾಬ್​ನ ಗಡಿ ಜಿಲ್ಲೆ ಫಿರೋಜ್​ಪುರದ ಮಮ್ದೋದ್ ಸಮೀಪದ ಲಾಖೊ ಕೇ ಬೆಹ್ರಾಂ ಗ್ರಾಮದಲ್ಲಿ 2 ದಿನಗಳ ಅಂತರದಲ್ಲಿ ನಾಲ್ವರು ಯುವಕರು ಮಾದಕದ್ರವ್ಯ ಸೇವನೆಯಿಂದ ಮೃತಪಟ್ಟಿದ್ದು ಇಡೀ ಪ್ರದೇಶದಲ್ಲಿ ಆತಂಕ ಹಾಗೂ ಸೂತಕದ ಛಾಯೆ ಆವರಿಸಿದೆ. ಒಬ್ಬ ಮಂಗಳವಾರ ಸತ್ತಿದ್ದು, ಬುಧವಾರ ಬೆಳಗ್ಗೆ ಇನ್ನೂ ಮೂವರು ಮೃತರಾದರೆಂದು ಗ್ರಾಮಸ್ಥರು ಹೇಳಿದ್ದಾರೆ. ಹಠಾತ್ ಸಾವುಗಳಿಂದ ಸಂತ್ರಸ್ತ ಕುಟುಂಬಗಳಲ್ಲಿ ದುಃಖ ಮಡುಗಟ್ಟಿದ್ದು ಮಾದಕದ್ರವ್ಯದ ವಿರುದ್ಧ ಯುದ್ಧ ಸಾರಲಾಗಿದೆ ಎಂಬ ಪಂಜಾಬ್ ಸರ್ಕಾರದ ಅಬ್ಬರದ ಪ್ರಚಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಡ್ರಗ್ ಹಾವಳಿ ತಡೆಯುವಲ್ಲಿ ಆಡಳಿತ ವಿಫಲವಾಗಿದೆ ಎಂದು ಜನರು ಆರೋಪಿಸಿದ್ದಾರೆ.

ಡ್ರಗ್ ಹಾವಳಿಗೆ ಬಲಿಯಾದವರನ್ನು ರಮಣ್ ಸಿಂಗ್, ಉಮೇದು ಸಿಂಗ್, ರಜತ್ ಸಿಂಗ್ ಮತ್ತು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ತನ್ನ ಮಗ ಹಲವು ವರ್ಷಗಳಿಂದ ಮಾದಕದ್ರವ್ಯ ವ್ಯಸನಿಯಾಗಿದ್ದು ಅದರಿಂದ ಹೊರ ತರಲು ಪ್ರಯತ್ನಿಸಲಾಗುತ್ತಿತ್ತು ಎಂದು 26 ವರ್ಷದ ರಮಣ್ ಸಿಂಗ್​ನ ತಂದೆ ಬಚಿತರ್ ಸಿಂಗ್ ಹೇಳಿದ್ದಾರೆ. ಭಾನುವಾರ ರಾತ್ರಿ ಕೆಲವು ಡ್ರಗ್ಸ್ ಸೇವಿಸಿದ್ದ ಪುತ್ರ ಮರುದಿನ ಬೆಳಗ್ಗೆ ಮೃತಪಟ್ಟ. ಮಗನನ್ನು ಐದು ಬಾರಿ ಪುನರ್​ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು ಎಂದು ವಿವರಿಸಿದ್ದಾರೆ. ಮಾದಕದ್ರವ್ಯ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

31 ಸಾವಿರಕ್ಕೂ ಅಧಿಕ ಜನರ ಬಂಧನ

ಮಾದಕವಸ್ತು ಕಳ್ಳಸಾಗಣೆ ಸಂಬಂಧ ಕಳೆದ ಏಳು ತಿಂಗಳಲ್ಲಿ ಪಂಜಾಬ್ ಪೊಲೀಸರು 31 ಸಾವಿರಕ್ಕೂ ಅಧಿಕ ಜನರನ್ನು ಬಂಧಿಸಿದ್ದು, ಒಟ್ಟು 1,300 ಕೆ.ಜಿ.ಗೂ ಅಧಿಕ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಮಾ.1ರಿಂದ ಸೆ.1ರ ಅವಧಿಯಲ್ಲಿ 20,641 ಎಫ್​ಐಆರ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net