ನಾಲ್ವರು ಪಾಕಿಸ್ತಾನ ಪ್ರಜೆಗಳ ಗಡಿಪಾರು

16-680d20bce042c
Published on

ಬೆಂಗಳೂರು: ರಾಜ್ಯದಲ್ಲಿ ಒಟ್ಟು 92 ಪಾಕಿಸ್ತಾನಿ ಪ್ರಜೆಗಳಿದ್ದು, ಈ ಪೈಕಿ 88 ಜನರು ದೀರ್ಘಾವಧಿ ವೀಸಾ ಹಾಗೂ 4 ಮಂದಿ ಮಾತ್ರ ಅಲ್ಪಾವಧಿ ವೀಸಾ ಹೊಂದಿದ್ದಾರೆ. ಕೇಂದ್ರ ಸರ್ಕಾರವು ದೀರ್ಘಾವಧಿ ವೀಸಾ ಪಡೆದವರನ್ನು ಗಡಿಪಾರು ಮಾಡಲು ಸೂಚಿಸಿಲ್ಲ. ಹೀಗಾಗಿ, 4 ಪಾಕಿಸ್ತಾನಿಗಳನ್ನು ಮಾತ್ರ ಹೊರಗಟ್ಟಲು ರಾಜ್ಯ ಸರ್ಕಾರ ಮುಂದಾಗಿದೆ.

ಪಹಲ್ಗಾಮ್ಲ್ಲಿ ನಡೆದ ಉಗ್ರರ ಅಟ್ಟಹಾಸದ ಹಿನ್ನೆಲೆಯಲ್ಲಿ ಕೇಂದ್ರವು ದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಹೊರ ಕಳುಹಿಸುವಂತೆ ರಾಜ್ಯಗಳಿಗೆ ತಾಕೀತು ಮಾಡಿದ್ದು, ವಿವಿಧ ಜಿಲ್ಲೆಗಳಲ್ಲಿ 92 ಮಂದಿ ವಾಸವಾಗಿದ್ದಾರೆ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆಯಲ್ಲಿ ತಿಳಿದುಬಂದಿದೆ. 5 ಪಾಕಿಸ್ತಾನಿ ಪ್ರಜೆಗಳು ವೈದ್ಯಕೀಯ ವೀಸಾದಡಿ ರಾಜ್ಯದಲ್ಲಿದ್ದಾರೆ. ಇವರಿಗೆ ಏ.29ರವರೆಗೆ ಮಾತ್ರ ದೇಶದಲ್ಲಿರಲು ಕೇಂದ್ರವು ವಿನಾಯಿತಿ ನೀಡಿದ್ದು, ಗಡುವಿನೊಳಗೆ ನಿಯಮಾನುಸಾರ ಹೊರ ಕಳುಹಿಸಲಾಗುವುದು ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಅತಿ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಭಟ್ಕಳದಲ್ಲಿ 14 ಹಾಗೂ ಕಾರವಾರದಲ್ಲಿ ಒಬ್ಬರು ಸೇರಿ ಒಟ್ಟಾರೆ 15 ಮಂದಿ ವಾಸವಾಗಿದ್ದಾರೆ. ಈ ಪೈಕಿ 12 ಮಹಿಳೆಯರು ಹಾಗೂ ಮೂವರು ಮಕ್ಕಳಿದ್ದಾರೆ. ಭಟ್ಕಳದ ನವಾಯತ್ ಸಮುದಾಯದಲ್ಲಿ ಪಾಕಿಸ್ತಾನಿಯರೊಂದಿಗಿನ ವೈವಾಹಿಕ ಸಂಬಂಧವು ಸಾಮಾನ್ಯವಾಗಿದ್ದು, ಮದುವೆಯ ನಂತರ ಭಾರತಕ್ಕೆ ಪ್ರವೇಶಿಸುವವರಿಗೆ ಸರ್ಕಾರ ದೀರ್ಘಾವಧಿಯ ವೀಸಾ ನೀಡುತ್ತದೆ.

ದಾವಣಗೆರೆಯಲ್ಲಿ ಪಾಕಿಸ್ತಾನಿ ವಿದ್ಯಾರ್ಥಿ: ದಾವಣಗೆರೆಯಲ್ಲಿ ಒಬ್ಬ ಪಾಕಿಸ್ತಾನಿ ಪ್ರಜೆಯಿದ್ದು, ಶಿಕ್ಷಣದ ವೀಸಾ ಮೇಲೆ ಭಾರತಕ್ಕೆ ಬಂದಿದ್ದಾರೆ. ಇವರು ವಿದ್ಯಾರ್ಥಿಯಾಗಿದ್ದು, ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ. ಇವರ ವೀಸಾ ಅವಧಿ ಇನ್ನೂ ಮುಗಿದಿಲ್ಲ.

25 ಮಂದಿ ಸೆರೆ: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 25 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಅಧಿಕೃತವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಾರ್ಚ್​ನಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಮಾಹಿತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net