ಬಿಜೆಪಿ ನಾಯಕನ ಕುಟುಂಬದ ನಾಲ್ವರು ನೇಣಿಗೆ ಶರಣು: ಡೆತ್​ನೋಟ್​ನಲ್ಲಿ ಸಾವಿನ ರಹಸ್ಯ ಬಯಲು!

BJP Leader
Published on

ಜೈಪುರ: ರಾಜಸ್ಥಾನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಮದನ್​ ಲಾಲ್​ ಸೈನಿ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಘಟನೆ ರಾಜಸ್ಥಾನದ ಸಿಕರ್​ ಜಿಲ್ಲೆಯಲ್ಲಿ ನಡೆದಿದೆ. ಮದನ್​ ಲಾಲ್​ ಸೈನಿ ಅವರು 2019ರಲ್ಲಿ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಹನುಮಾನ್​ ಪ್ರಸಾದ್​ ಸೈನಿ, ಅವರ ಪತ್ನಿ ತಾರಾ ಮತ್ತು ಇಬ್ಬರು ಹೆಣ್ಣುಮಕ್ಕಳಾದ ಅಂಜು ಮತ್ತು ಪೂಜಾ ಎಂದು ಗುರುತಿಸಲಾಗಿದೆ. ನಾಲ್ವರು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

ಪ್ರಾಥಮಿಕ ವರದಿಯ ಪ್ರಕಾರ ಕಳೆದ ಸೆಪ್ಟೆಂಬರ್​ನಲ್ಲಿ ದಂಪತಿಯ ಕಿರಿಯ ಮಗ (17-18ರ ನಡುವಿನ ವಯಸ್ಸು) ಮೃತಪಟ್ಟಿದ್ದರಿಂದ ಇಡೀ ಕುಟುಂಬ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿತ್ತೆಂದು ಹೇಳಲಾಗಿದೆ.

ಆತ್ಮಹತ್ಯೆ ಸುದ್ದಿ ತಿಳಿದ ಬೆನ್ನಲ್ಲೇ ಉದ್ಯೋಗ್​ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಕರ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಕುನ್ವಾರ್​ ರಾಷ್ಟ್ರದೀಪ್​ ಸಹ ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಸಿಕರ್​ನಲ್ಲಿನ ಶ್ರೀ ಕಲ್ಯಾಣ್​ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಹನುಮಾನ್​ ಪ್ರಸಾದ್​ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್ ಪತ್ತೆಯಾಗಿದ್ದು, ಅದರ​ ಪ್ರಕಾರ ಮಗನನ್ನು ಕಳೆದುಕೊಂಡು ಹನುಮಾನ್​ ಕುಟುಂಬ ಬದುಕಲು ಕಷ್ಟಪಡುತ್ತಿದ್ದರಂತೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.

ಹನುಮಾನ್​ ಪ್ರಸಾದ್​ ಸೈನಿ ಅವರು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ (2018) ದಿವಂಗತ ಮದನ್​ ಲಾಲ್​ ಸೈನಿ ಅವರ ಸೋದರಸಂಬಂಧಿ. ವಸುಂಧರಾ ರಾಜೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮದನ್​ ಲಾಲ್​ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net