

ಕೋಲಾರ: ಕರ್ನಾಟಕ ನಾಟಕ ಅಕಾಡೆಮಿಯು ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು, ಜಿಲ್ಲೆಯ 4 ಮಂದಿ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು 2024ನೇ ಸಾಲಿನ ಗೌರವ ಪ್ರಶಸ್ತಿ, ಲಕ್ಷ್ಮೀಪತಿ ಕೋಲಾರ ಅವರಿಗೆ ವಾರ್ಷಿಕ ಪ್ರಶಸ್ತಿ, ಪ್ಲೋರಾ ಅಚ್ಯುತ ಅವರಿಗೆ ಮಾಲತಿಶ್ರೀ ಮೈಸೂರು ದತ್ತಿ ಪ್ರಶಸ್ತಿ ಹಾಗೂ ಡಾ.ಮುನಿನಾರಾಯಣ ಅವರಿಗೆ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು ಜಾತಿ ತಾರತಮ್ಯದ ವಿರುದ್ಧ, ಅಸ್ಪಶ್ಯ ಜಾತಿಗಳಿಗೆ ಭೂಮಿ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ಪಾಲ್ಗೊಂಡು ತಮ್ಮದೆ ಛಾಪು ಮೂಡಿಸಿದ್ದಾರೆ. 2005ರಲ್ಲಿ ತಾಲೂಕಿನ ತೆರಹಳ್ಳಿ ಬೆಟ್ಟದಲ್ಲಿ ಆದಿಮ ಸಾಂಸತಿಕ ಕೇಂದ್ರ ಸ್ಥಾಪಿಸಿ ವಿಶಾಲ ಆಧಾರಿತ ಸಾಂಸತಿಕ ಪ್ರಕ್ರಿಯೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ರಾಜಕೀಯ ಆಧುನಿಕತೆಯ ಅಗತ್ಯವನ್ನು ಸಾಂಸತಿಕ ಪ್ರತಿರೋಧದ ಇತಿಹಾಸ ಮತ್ತು ಶತಮಾನಗಳ ಪ್ರತಿಕ್ರಿಯೆಯಾಗಿ ವಿಕಸನಗೊಂಡ ತಾತ್ವಿಕ ಅರ್ಥ ವ್ಯವಸ್ಥೆಗಳ ತಿಳುವಳಿಕೆಯೊಂದಿಗೆ ಹದಗೊಳಿಸುವ ಗುರಿ ಹೊಂದಿರುವ ಪ್ರಾಯೋಗಿಕ ಸ್ಥಳವಾಗಿದೆ. ನಾಟಕಗಳು ಮತ್ತು ಚಲನಚಿತ್ರಗಳ ರಚನೆ, ಆದಿಮ ಹುಣ್ಣಿಮೆ ಹಾಡು, ಕರ್ನಾಟಕದಾದ್ಯಂತ ನಾಟಕಗಳನ್ನು ಒಳಗೊಂಡ ಹುಣ್ಣಿಮೆಯ ರಾತ್ರಿಯ ಈವೆಂಟ್ಗೆ ಆತಿಥ್ಯ ವಹಿಸುತ್ತಿದೆ.
ರಾಮಯ್ಯ ಅವರಿಗೆ 2012ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸುವರ್ಣ ರಂಗ ಸಮ್ಮಾನ್, ಕನ್ನಡ ಸಂಘ ಕಾಂತಾವರ ಹಾಗೂ 2015ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದು, 2024ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.