

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಬೆಂಗಳೂರಿಗೆ ಸಚಿವರ ಬಂಪರ್ ಭಾಗ್ಯ ಸಿಕ್ಕಿದೆ. ಬೆಂಗಳೂರಿನ ಏಳು ಮಂದಿಗೆ ಸಂಪುಟದಲ್ಲಿ ಸ್ಥಾನ ನೀಡುವ ದೊಡ್ಡ ಕೊಡುಗೆಯನ್ನು ಬಿಎಸ್ವೈ ನೀಡಿದ್ದಾರೆ.
ವಿಶೇಷವಾಗಿ ಬೆಂ.ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷಿ್ಮ ಲೇಔಟ್, ಮಲ್ಲೇಶ್ವರ ಕ್ಷೇತ್ರಗಳ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಮಲ್ಲೇಶ್ವರ ಶಾಸಕ ಅಶ್ವತ್ಥನಾರಾಯಣ ಡಿಸಿಎಂ ಪದವಿ ಅಲಂಕರಿಸಿದ್ದಾರೆ.
ಮೊದಲ ಹಂತದಲ್ಲಿ 4 ಸ್ಥಾನ: ಬಿಜೆಪಿ ಸರ್ಕಾರದ ಮೊದಲ ಹಂತದ ಸಚಿವ ಸಂಪುಟಕ್ಕೆ ಪದ್ಮನಾಭನಗರದ ಶಾಸಕ ಆರ್.ಅಶೋಕ್, ಮಲ್ಲೇಶ್ವರ ಶಾಸಕ ಅಶ್ವತ್ಥನಾರಾಯಣ, ಗೋವಿಂದರಾಜನಗರ ಶಾಸಕ ವಿ.ಸೋಮಣ್ಣ, ರಾಜಾಜಿನಗರ ಶಾಸಕ ಸುರೇಶ್ಕುಮಾರ್ ಅವರಿಗೆ ಮಂತ್ರಿ ಸ್ಥಾನ ಲಭಿಸಿತ್ತು. ಮೈತ್ರಿ ಸರ್ಕಾರ ಪತನಗೊಳಿಸಿ, ಬಿಜೆಪಿ ಸೇರ್ಪಡೆಗೊಂಡು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೈರತಿ ಬಸವರಾಜ, ಕೆ.ಗೋಪಾಲಯ್ಯ, ಎಸ್.ಟಿ. ಸೋಮಶೇಖರ್ 2ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದಿದ್ದಾರೆ.
ಮನೆ ಮಾಡಿದ ಸಂಭ್ರಮ: ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ, ಯಶವಂತಪುರ, ಮಹಾಲಕ್ಷಿ್ಮ ಲೇಔಟ್ನಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ಆಯಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರು ಸಚಿವರಾದ ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇನ್ನು ಹಲವೆಡೆ ಸಿಹಿ ಹಂಚಿ ಖುಷಿಪಟ್ಟರು. ಗೋಪಾಲಯ್ಯ, ಬಸವರಾಜ ಮತ್ತು ಸೋಮಶೇಖರ್ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ನೆರವೇರಿಸಿದರು.
ಗೌಡಯ್ಯ ನೋಡಿ ಮುಜುಗರ: ಪ್ರಮಾಣವಚನ ಸ್ವೀಕರಿಸಿದ ನಂತರ ಸೋಮಶೇಖರ್, ಬೈರತಿ ಬಸವರಾಜ್, ಗೋಪಾಲಯ್ಯ, ನಾರಾಯಣಗೌಡ ಹಾಗೂ ಡಾ.ಕೆ. ಸುಧಾಕರ್ ಆದಿಚುಂಚನಗಿರ ಮಠಕ್ಕೆ ಬಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದರು. ಆ ವೇಳೆ, ಬಿಡಿಎದಲ್ಲಿದ್ದಾಗ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಎಸಿಬಿ ದಾಳಿಗೆ ಒಳಗಾಗಿದ್ದ ಗೌಡಯ್ಯ ಇದ್ದದ್ದು ಸಚಿವರು ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಸಚಿವರು ಬರುವುದಕ್ಕೆ ಮುಂಚೆಯೇ ಗೌಡಯ್ಯ ಅಲ್ಲಿದ್ದರು. ನಮ್ಮ ಜತೆ ಬಂದಿಲ್ಲದಿದ್ದರೂ ತಪು್ಪ ಸಂದೇಶ ರವಾನೆ ಆಗುವಂತಾಯಿತು ಎಂದು ಸಚಿವರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಕಾರಿಗಾಗಿ ತಡಕಾಟ..
ನೂತನ ಸಚಿವರಿಗೆ ಸರ್ಕಾರ ಕಾರು ನೀಡಿದೆ. ರಾಜಭವನದಿಂದ ಸಿಎಂ ಕಚೇರಿಗೆ ಬಂದ ಸಚಿವರು ಮರಳಿ ಹೋಗುವಾಗ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಂದು ತಮಗೆ ಹಂಚಿಕೆ ಮಾಡಿದ್ದ ಕಾರುಗಳಿಗಾಗಿ ತಡಕಾಡಿದ ದೃಶ್ಯ ಕಂಡುಬಂದಿತು.