ಒಂದೇ ಕುಟುಂಬದ ನಾಲ್ವರ ಸಾವು; ಜೊತೆಯಾಗಿ ಕೋಣೆಯಲ್ಲಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆ!

dd
Published on

ಬೆಂಗಳೂರು: ರಾತ್ರಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಬೆಳಗ್ಗೆ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ಗ್ರಾಮಾಂತರದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋಳಿ ಫಾರಂವೊಂದರ ಬಳಿ ಇರುವ ಕೋಣೆಯೊಂದರಲ್ಲಿ ಪಶ್ಚಿಮ ಬಂಗಾಳದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.


ಕೋಳಿ ಫಾರಂನಲ್ಲಿ ರಾತ್ರಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಬೆಳಗ್ಗೆ ಶವವಾಗಿ ಪತ್ತೆಯಾದ ಸುದ್ದಿ ಕೇಳಿ ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದವರು ಪಶ್ಚಿಮ ಬಂಗಾಳ ಮೂಲದವರು ಎಂದು ಹೇಳಲಾಗಿದೆ.


ಕಾಳೆ ಸರಿಕಿ (60), ಲಕ್ಷ್ಮಿ ಸರಿಕಿ (50), ಉಷಾ ಸರಿಕಿ (40), ಮತ್ತು ಪೂಲ್ ಸರಿಕಿ (16) ಮೃತ ದುರ್ದೈವಿಗಳು. ಈ ಕುಟುಂಬವು ಪಶ್ಚಿಮ ಬಂಗಾಳದ ಅಲಿಪುರದವಾರ್ ಜಿಲ್ಲೆಯವರಾಗಿದ್ದು, ಕಳೆದ 10 ದಿನಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಹೊಳೆಯರಹಳ್ಳಿಯ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದರು.


ಪೊಲೀಸರ ಪ್ರಕಾರ, ಭಾನುವಾರ ಬೆಳಿಗ್ಗೆ ಸಮೀಪದ ಹಳ್ಳಿಯಲ್ಲಿ ಕೆಲಸ ಮಾಡುವ ಕಾಳೆ ಅವರ ಮಗಳು ಪೊಲೀಸರನ್ನು ಸಂಪರ್ಕಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆಕೆಯ ಕರೆಗಳಿಗೆ ಕುಟುಂಬ ಸದಸ್ಯರು ಯಾರೂ ಸ್ಪಂದಿಸದಿದ್ದಾಗ, ಕೋಳಿ ಫಾರಂಗೆ ಬಂದು ಪರಿಶೀಲಿಸಿದ್ದಾಳೆ . ಆಗ ಮನೆಯ ಮುಚ್ಚಿದ ಕಿಟಕಿಗಳಿಂದ ಹೊಗೆ ಬರುತ್ತಿರುವುದು ಕಂಡು ಬಂದಿದೆ.


ಸ್ಥಳಕ್ಕಾಗಮಿಸಿದ ಪೊಲೀಸರು, ಬೀಗ ಹಾಕಲಾಗಿದ್ದ ಕೋಣೆ ಒಡೆದು ಒಳಗೆ ನುಗ್ಗಿದ್ದಾರೆ. ಕೋಣೆಯೊಳಗೆ ಚಾರ್ಕೋಲ್ ಹೀಟರ್, ಕೆಲವು ಎಲೆಗಳು ಮತ್ತು ಕುಟುಂಬದ ಸದಸ್ಯರ ದೇಹಗಳು ಬಿದ್ದಿರುವುದನ್ನು ಕಂಡು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನೂ ಕರೆಸಿ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಕುಟುಂಬದ ಸದಸ್ಯರ ದೇಹಗಳು ಬಿದ್ದಿರುವುದನ್ನು ಕಂಡ ಪೊಲೀಸರು ಮೃತದೇಹವನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹಸ್ತಾಂತರಿಸಿದ್ದಾರೆ. ಭಾನುವಾರದಂದು ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಳೆಯಾಗುತ್ತಿದ್ದರಿಂದ ಮನೆಯವರು ಸೊಳ್ಳೆ ಬರದಿರಲು ಪರ್ಯಾಯವಾಗಿ ಚಾರ್ಕೋಲ್ ಹೀಟರ್ ಮತ್ತು ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಕೆಲವು ಎಲೆಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.


ಕೋಣೆಯಲ್ಲಿ ಸರಿಯಾಗಿ ಗಾಳಿಯಾಡುತ್ತಿರಲಿಲ್ಲ, ಒಳಗಿನಿಂದ ಬಾಗಿಲು ಮುಚ್ಚಿದ್ದರಿಂದ, ಕ್ರಮೇಣ ಉರಿಯುತ್ತಿರುವ ಇದ್ದಿಲಿನ ಹೊಗೆ ಇಡೀ ಕೋಣೆಯನ್ನು ಆವರಿಸಿದೆ, ಜೊತೆಗೆ ಉಸಿರುಗಟ್ಟುವಿಕೆಗೆ ಕಾರಣವಾಯಿತು.


ಉಸಿರುಕಟ್ಟುವಿಕೆಯಿಂದಾಗಿ ಅವರು ಸಾವಿಗೀಡಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ ಎಂದು ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ.
ಇನ್ನು ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ. ಒಳಗೆ ಯಾವುದೇ ರೀತಿಯ ವಿಷಕಾರಿ ವಸ್ತುಗಳೂ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಯಾವುದೇ ರೀತಿಯ ವಿಷಕಾರಿ ವಸ್ತುಗಳೂ ಕೋಣೆಯೊಳಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಪ್ರಕ್ರಿಯಾ ಸಂಹಿತೆ 174ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ಮುಂದುವರಿದಿದೆ.


ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕ ನಂತರದಲ್ಲಿ, ನಾಲ್ವರು ಮಂದಿಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಲದಂಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net