ಸಣ್ಣ ಜಗಳಕ್ಕೆ ನಾಲ್ವರ ಬಲಿ! CISF ಹೆಡ್ ಕಾನ್ಸ್‌ಟೇಬಲ್‌ನಿಂದಲೇ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ! CISF Shooting

ಕಥುವಾದಲ್ಲಿ ಸಿಐಎಸ್‌ಎಫ್ ಜವಾನನಿಂದ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ! ಅಧಿಕಾರಿ ಸೇರಿ ನಾಲ್ವರು ಸಿಬ್ಬಂದಿ ಸಾವು. ಸಂಪೂರ್ಣ ಹಾಗೂ ರೋಚಕ ವರದಿ ಇಲ್ಲಿದೆ.
Representative image
ಸಾಂದರ್ಭಿಕ ಚಿತ್ರ
Published on: 

ಕಥುವಾ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಸಣ್ಣದೊಂದು ಮಾತಿನ ಚಕಮಕಿ ತಾರಕ್ಕಕ್ಕೇರಿದ ಪರಿಣಾಮ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿಯೊಬ್ಬ, ತಮ್ಮ ಸಹದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

ಮಾಹಿತಿ ಪ್ರಕಾರ, ಸಿಐಎಸ್​ಎಫ್​ ಸಿಬ್ಬಂದಿ, ಮನಬಂದಂತೆ ಗುಂಡಿನ ಮಳೆಹರಿಸಿದ ಪರಿಣಾಮವಾಗಿ ಒಬ್ಬ ಸಿಐಎಸ್​ಎಫ್​ ಅಧಿಕಾರಿ ಸೇರಿದಂತೆ ಒಟ್ಟು ನಾಲ್ವರು ಸಿಐಎಸ್‌ಎಫ್ ಸಿಬ್ಬಂದಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಸೇವಾ ವಿದ್ಯುತ್ ಪ್ಲ್ಯಾಂಟ್​ ನಡೆದ ಕರಾಳ ಕೃತ್ಯ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಲಿ ಮಶ್ಕಾ ಗ್ರಾಮದಲ್ಲಿ ಸೇವಾ ವಿದ್ಯುತ್ ಪ್ಲ್ಯಾಂಟ್​ (Sewa Power Project) ಇದೆ. ಈ ಪ್ರಮುಖ ವಿದ್ಯುತ್ ಸ್ಥಾವರದ ಭದ್ರತೆಯ ಜವಾಬ್ದಾರಿಯನ್ನು ಸಿಐಎಸ್‌‌ಎಫ್ ಪಡೆಗೆ ವಹಿಸಲಾಗಿತ್ತು. ಇಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಯ ನಡುವೆ ಸಂಜೆ 6.40ರ ಸುಮಾರಿಗೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ನಡೆದಿದೆ.

ಮಾತುಗಳು ವಿಕೋಪಕ್ಕೆ ತಿರುಗಿದಾಗ, ಆಕ್ರೋಶಗೊಂಡ ಹೆಡ್ ಕಾನ್ಸ್‌ಟೇಬಲ್ ಅವದೇಶ್ ಕುಮಾರ್ ಸಿಂಗ್ ಎಂಬಾತ ತನ್ನ ಬಳಿಯಿದ್ದ ಎಕೆ-47 ರೈಫಲ್ ತೆಗೆದುಕೊಂಡು ಕಚೇರಿ ಆವರಣಕ್ಕೆ ನುಗ್ಗಿದ್ದಾನೆ. ಬಳಿಕ ತನ್ನದೇ ಸಹೋದ್ಯೋಗಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ್ದಾನೆ. ಈ ವೇಳೆ ಆತನ ಬಳಿ ಬರೋಬ್ಬರಿ 150 ಸುತ್ತಿನ ಮದ್ದುಗುಂಡುಗಳಿದ್ದವು ಎಂದು ಮೂಲಗಳು ತಿಳಿಸಿವೆ.

ಪ್ರಾಣ ಕಳೆದುಕೊಂಡ ದುರ್ದೈವಿಗಳು ಯಾರು?

ಈ ಅನಿರೀಕ್ಷಿತ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಹಿಮಾಚಲ ಪ್ರದೇಶದ ಎನ್‌‌ಎಚ್‌ಪಿಸಿ (NHPC) ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಆದರೆ, ಗುಂಡಿನೇಟಿನ ತೀವ್ರತೆ ಹೆಚ್ಚಿದ್ದ ಕಾರಣ ಹಾಗೂ ಅಧಿಕ ರಕ್ತಸ್ರಾವದಿಂದಾಗಿ ಆಸ್ಪತ್ರೆ ತಲುಪುವಷ್ಟರಲ್ಲಿ ನಾಲ್ವರೂ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಮೃತರನ್ನು ಸಹಾಯಕ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ, ಸಬ್-ಇನ್ಸ್‌ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್ಸ್‌ಟೇಬಲ್ ರಫೀಕ್ ಅಹ್ಮದ್ ಹಾಗೂ ಕಾನ್ಸ್‌ಟೇಬಲ್ ಸಂದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಒಡನಾಡಿಗಳೇ ಜೊತೆಯಲ್ಲಿ ತಿಂದು-ಕುಳಿತು ಕೆಲಸ ಮಾಡುತ್ತಿದ್ದವರೇ ಈ ರೀತಿಯ ಕ್ರೌರ್ಯ ಮೆರೆದಿರುವುದು ಮೃತರ ಕುಟುಂಬಸ್ಥರ ಆಕ್ರೋಶ ಹಾಗೂ ದುಃಖಕ್ಕೆ ಕಾರಣವಾಗಿದೆ.

Also Read
ಶಾರುಖ್, ಸಲ್ಮಾನ್, ಆಮೀರ್‌ಗಿಂತಲೂ ಶ್ರೀಮಂತ! 36,000 ಕೋಟಿ ಆಸ್ತಿ ಒಡೆಯನಾದ ಬಾಲಿವುಡ್‌ನ ಈ ಉದ್ಯಮಿ ಯಾರು? ಇಲ್ಲಿದೆ ಕಂಪ್ಲೀಟ್​ ಡಿಟೇಲ್ಸ್​! Bhushan Kumar
Representative image

ಎಚ್ಚೆತ್ತ ಪೊಲೀಸರು, ಆರೋಪಿ ಸೆರೆ!

ಘಟನೆ ನಡೆದ ತಕ್ಷಣವೇ ಸ್ಥಳೀಯ ಕಥುವಾ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಹೆಡ್ ಕಾನ್ಸ್‌‌ಟೇಬಲ್ ಅವದೇಶ್ ಕುಮಾರ್ ಸಿಂಗ್‌ನನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದು ಬಂಧಿಸಿದ್ದಾರೆ.

ಕಥುವಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕೇವಲ ಕ್ಷುಲ್ಲಕ ಕಾರಣಕ್ಕೆ ಅಥವಾ ಆಂತರಿಕ ವಾಗ್ವಾದಕ್ಕೆ ಇಷ್ಟು ದೊಡ್ಡ ಪ್ರಾಣಹಾನಿ ಸಂಭವಿಸಿರುವುದು ಭದ್ರತಾ ಪಡೆಗಳ ಮಾನಸಿಕ ಒತ್ತಡದ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸದ್ಯ ಈ ಘಟನೆಗೆ ನಿಖರವಾದ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net