

ಮುಂಬೈ: ಬಾಲಿವುಡ್ ಎಂಬ ಹೆಸರನ್ನು ಕೇಳಿದ ತಕ್ಷಣ ನೆನಪಾಗುವುದೇ, ನಗು ಮುಖದ ಹಿರೋಗಳು, ರೂಪವಂತ ನಟಿಯರು, ಖಡಕ್ ವಿಲನ್ಗಳು. ಆದರೆ ಬಾಲಿವುಡ್ ಕೇವಲ ಒಂದು ಸಿನಿರಂಗ ಅಥವಾ ಮನೋರಂಜನೆ ನೀಡುವ ಮಾಧ್ಯಮವಲ್ಲ. ಇಲ್ಲಿ ಕೋಟಿ-ಕೋಟಿ ಹಣವನ್ನು ಸುರಿದು ಸಿನಿಮಾವನ್ನು ನಿರ್ಮಿಸಿ, ಕೋಟ್ಯಾಂತರ ರೂಪಾಯಿ ಗಳಿಸುತ್ತಾರೆ. ಹಾಗೆ ಕಳೆದುಕೊಳ್ಳುತ್ತಾರೆ.
ಇಂದು ನಾವು, ಬಾಲಿವುಡ್ನಲ್ಲಿ ಕಳೆದ 30 ವರ್ಷಗಳಿಂದ ಗಟ್ಟಿಯಾಗಿ ನೆಲೆನಿಂತು, ಒಂದರ್ಥದಲ್ಲಿ ಬಾಲಿವುಡ್‌ನ ಪ್ರಮುಖ ಕೊಂಡಿಯಾಗಿರುವ ಒಂದು ಸಂಸ್ಥೆ ಬಗ್ಗೆ ತಿಳಿಯಲಿದ್ದೆವೆ. ಈ ಸಂಸ್ಥೆಯ ಆಸ್ತಿ ಮೌಲ್ಯ ಎಷ್ಟಿದೆ ಎಂದರೆ ತ್ರಿವಳಿ ಖಾನ್ಗಳೆಂದೇ, ಖ್ಯಾತರಾಗಿರುವ ಆಮೀರ್, ಶಾರುಖ್ ಹಾಗೂ ಸಲ್ಮಾನ್ ಮೂವರ ಒಟ್ಟು ಆಸ್ತಿ ಸೇರಿಸಿದರೂ ಇವರ ಅರ್ಧಕ್ಕೂ ಬರಲು ಸಾಧ್ಯವಿಲ್ಲ. ಹಾಗಾದರೆ ಆ ಶ್ರೀಮಂತ ಸಂಸ್ಥೆ ಯಾವುದು? ಅದರ ಇತಿಹಾಸವೇನು? ಎಲ್ಲವಲ್ಲೂ ಇಲ್ಲಿ ತಿಳಿಯೋಣ.
ಕಳೆದ ವಾರ ಬಿಡುಗಡೆಯಾದ 'ಹುರುನ್ ಇಂಡಿಯಾ ರಿಚ್ ಲಿಸ್ಟ್ 2026' ವರದಿಯು ದೇಶದ ಅತಿ ಶ್ರೀಮಂತರ ವಿವರ ಹೊರಹಾಕಿದೆ. ಎಂದಿನಂತೆ ಅಂಬಾನಿ ಮತ್ತು ಅದಾನಿ ಕುಟುಂಬಗಳು ಮೊದಲ ಎರಡು ಸ್ಥಾನಗಳಲ್ಲಿವೆ. ಆದರೆ ಮನರಂಜನಾ ಲೋಕದಿಂದ ಒಬ್ಬ ವ್ಯಕ್ತಿ ನೇರವಾಗಿ ದೇಶದ ಅಗ್ರ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರೇ ಪ್ರಸಿದ್ಧ 'ಟಿ-ಸೀರೀಸ್' ಸಂಸ್ಥೆಯ ಮುಖ್ಯಸ್ಥ ಭೂಷಣ್ ಕುಮಾರ್.
ವರದಿ ಪ್ರಕಾರ, ಭೂಷಣ್ ಕುಮಾರ್ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯ ಬರೋಬ್ಬರಿ ಸುಮಾರು 36,300 ಕೋಟಿ. ಇವರು ಈ ಪಟ್ಟಿಯಲ್ಲಿ 87ನೇ ಸ್ಥಾನದಲ್ಲಿದ್ದಾರೆ. ವಿಶೇಷ ಎಂದರೆ, ದೇಶದ ಅನೇಕ ದಿಗ್ಗಜ ಉದ್ಯಮಿಗಳು ಹಾಗೂ ಇತರೆ ಖ್ಯಾತ ನಿರ್ಮಾಪಕರಾದ ರೋನಿ ಸ್ಕ್ರೂವಾಲಾ, ಹಾಗೂ ಸನ್ ಪಿಕ್ಚರ್ಸ್‌ನ ಕಲಾನಿತಿ ಮಾರನ್ ಅವರ ಆಸ್ತಿಗಿಂತಲೂ ಭೂಷಣ್ ಕುಮಾರ್ ಅವರ ಸಂಪತ್ತು ಎರಡು ಪಟ್ಟಿದೆ. ಕೇವಲ ಎರಡು ವರ್ಷಗಳ ಹಿಂದೆ ಇವರ ಕುಟುಂಬದ ಆಸ್ತಿ 10,500 ಕೋಟಿ ಇತ್ತು. ಆದರೆ ಈಗ ಅದು ಮೂರೂವರೆ ಪಟ್ಟು ಹೆಚ್ಚಾಗಿ ಕುಭೇರ ಸಂಪತ್ತಾಗಿ ಬೆಳೆದು ನಿಂತಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಆಸ್ತಿ ಮೌಲ್ಯ ಸುಮಾರು 9,500 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಈ ಮೂವರು ಸ್ಟಾರ್ ನಟರ ಒಟ್ಟು ಆಸ್ತಿ ಸುಮಾರು 15,000 ಕೋಟಿ ಆಗುತ್ತದೆ. ಇದನ್ನು ಒಟ್ಟಿಗೆ ಸೇರಿಸಿದರೂ, ಭೂಷಣ್ ಕುಮಾರ್ ಅವರ ಸಂಪತ್ತಿನ ಅರ್ಧದಷ್ಟೂ ಆಗುವುದಿಲ್ಲ. ಈ ಮೂಲಕ ನಟರಿಗಿಂತ ಮ್ಯೂಸಿಕ್ ಸಾಮ್ರಾಜ್ಯ ಕಟ್ಟಿದವರೇ ಅತಿ ದೊಡ್ಡ ಶ್ರೀಮಂತರು ಎಂಬುದನ್ನು ಈ ಸಂಸ್ಥೆ ಸಾಬೀತುಪಡಿಸಿದೆ.
'ಟಿ-ಸೀರೀಸ್' ಸಂಸ್ಥೆಯನ್ನು 1983ರಲ್ಲಿ ಗುಲ್ಶನ್ ಕುಮಾರ್ ಸ್ಥಾಪಿಸಿದ್ದರು. ದುರದೃಷ್ಟವಶಾತ್ 1997ರಲ್ಲಿ ಗುಲ್ಶನ್ ಕುಮಾರ್ ನಿಧನರಾದಾಗ, ಕೇವಲ 19 ವರ್ಷದ ಹುಡುಗನಾಗಿದ್ದ ಭೂಷಣ್ ಕುಮಾರ್ ತಮ್ಮ ಚಿಕ್ಕಪ್ಪ ಕೃಷನ್ ಕುಮಾರ್ ಜೊತೆಗೂಡಿ ಕಂಪನಿಯ ಇಡೀ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹಾಕಿಕೊಂಡರು.
ಅಂದಿನಿಂದ ಶುರುವಾದ ಇವರ ಪಯಣ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇವಲ ಮ್ಯೂಸಿಕ್ ಕಂಪನಿಯಾಗಿದ್ದ ಟಿ-ಸೀರೀಸ್, ಇಂದು ಸಿನಿಮಾ ವಿತರಣೆ ಮತ್ತು ನಿರ್ಮಾಣದಲ್ಲೂ ಮುಂಚೂಣಿಯಲ್ಲಿದೆ. 2026ರಲ್ಲೇ ಟಿ-ಸೀರೀಸ್ ನಿರ್ಮಾಣದ ಮೂರು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 700 ಕೋಟಿ ಕಲೆಕ್ಷನ್ ಮಾಡಿವೆ. ಅಷ್ಟೇ ಅಲ್ಲ, ವಿಶ್ವದಲ್ಲೇ ಅತಿ ಹೆಚ್ಚು ಅಂದರೆ 30 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಹಾಗೂ 35,300 ಕೋಟಿಗೂ ಅಧಿಕ ವೀಕ್ಷಣೆ ಪಡೆದ ವಿಶ್ವದ ನಂ.1 ಯೂಟ್ಯೂಬ್ ಚಾನೆಲ್ ಎಂಬ ಹೆಗ್ಗಳಿಕೆಯೂ ಇದರದ್ದಾಗಿದೆ. ಭಾರತೀಯ ಮ್ಯೂಸಿಕ್ ಮಾರುಕಟ್ಟೆಯ ಶೇ. 35ರಷ್ಟು ಪಾಲು ಇಂದು ಟಿ-ಸೀರೀಸ್ ಬಳಿಯಿದೆ.
ಕಷ್ಟದ ದಿನಗಳನ್ನು ಮೆಟ್ಟಿ ನಿಂತು, ವ್ಯವಹಾರದ ಚತುರತೆಯಿಂದ ಇಂದು ಭಾರತದ ಮನರಂಜನಾ ಲೋಕದ ನಂ.1 ಶ್ರೀಮಂತನಾಗಿ ಹೊರಹೊಮ್ಮಿರುವ ಭೂಷಣ್ ಕುಮಾರ್ ಅವರ ಸಾಧನೆ ನಿಜಕ್ಕೂ ಯುವ ಉದ್ಯಮಿಗಳಿಗೆ ದೊಡ್ಡ ಸ್ಫೂರ್ತಿ ಎಂದೇ ಹೇಳಬಹುದಾಗಿದೆ, (ಏಜೆನ್ಸೀಸ್).