

ನವದೆಹಲಿ: ಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಕಷ್ಟಗಳು ಎದುರಾದಾಗ ಎಲ್ಲವೂ ಮುಗಿಯಿತು ಎಂದನಿಸುತ್ತದೆ. ಆದರೆ ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಕಷ್ಟವನ್ನೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ಭಾರತದ ಹೆಮ್ಮೆಯ ಶೂಟರ್ ನೀರು ಧಾಂಡಾ (Neeru Dhanda) ನೈಜ ಉದಾಹರಣೆಯಾಗಿದ್ದಾರೆ. ಏಷ್ಯನ್ ಗೇಮ್ಸ್ ಆರಂಭವಾಗಲು ಕೇವಲ ಹತ್ತು ದಿನ ಬಾಕಿ ಇದ್ದಾಗ, ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಈಕೆ, ಇಂದು ದೇಶಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ತರಬೇತಿ ಶಿಬಿರದ ಸಮಯದಲ್ಲಿ ನೀರು ಧಾಂಡಾ ಅವರಿಗೆ ತೀವ್ರ ಅನಾರೋಗ್ಯ ಉಂಟಾಯಿತು. ಸೋಂಕು ತಗುಲಿ ಅವರ ಆರೋಗ್ಯ ಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ಸುಮಾರು ಮೂರೂವರೆ ವಾರಗಳ ಕಾಲ ಅವರಿಗೆ ಯಾವುದೇ ತರಬೇತಿ ಪಡೆಯಲು ಸಾಧ್ಯವಾಗಲಿಲ್ಲ.
ಸತತ ಐದು ದಿನಗಳಂತೂ ಅವರು ಯಾವುದೇ ಆಹಾರವನ್ನೂ ಸೇವಿಸದೆ, ಕೇವಲ ನೀರನ್ನು ಮಾತ್ರ ಕುಡಿದು ಜೀವಂತವಿದ್ದರು. ನಂತರ, ಏಷ್ಯನ್ ಗೇಮ್ಸ್ ನಡೆಯುತ್ತಿರುವ ಜಪಾನ್ ದೇಶಕ್ಕೆ ಧಾಂಡಾ ತಲುಪುತ್ತಾರೋ ಇಲ್ಲವೋ? ಎಂಬ ಆತಂಕ ಎಲ್ಲರಲ್ಲಿ ಮೂಡಿತ್ತು. ಆದರೆ, ನೀರು ಧಾಂಡಾ ಈ ಎಲ್ಲಾ ಕಷ್ಟಗಳನ್ನು ಎದುರಿಸಿ, ಜಪಾನ್ಗೆ ತೆರಳಿ ಚಿನ್ನದ ಬೇಟೆಯಾಡಿದ್ದಾರೆ.
ಜಪಾನ್‌ನ ಟೊಯೋಟಾದ ಉರೆನೊಚೊ ಶೂಟಿಂಗ್ ರೇಂಜ್‌ನಲ್ಲಿ ಮಳೆ ಸುರಿಯುತ್ತಿದ್ದರೂ, ನೀರು ಧಾಂಡಾ ಧೃತಿಗೆಡಲಿಲ್ಲ. ಫೈನಲ್ ಸುತ್ತಿನಲ್ಲಿ ತಮ್ಮ ಅದ್ಭುತ ಗುರಿ ಕೌಶಲ ಪ್ರದರ್ಶಿಸಿ 30 ಗುರಿಗಳಲ್ಲಿ 28ನ್ನು ಯಶಸ್ವಿಯಾಗಿ ಭೇದಿಸಿದರು. ಇದರೊಂದಿಗೆ ನೂತನ ಏಷ್ಯನ್ ಗೇಮ್ಸ್ ದಾಖಲೆಯನ್ನೂ ಬರೆದಿದ್ದಾರೆ. 26 ಗುರಿಗಳನ್ನು ಭೇದಿಸಿದ ಚೀನಾದ ಸನ್ ಯುನಾಂಗ್ ಅವರನ್ನು ಮಣಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
1978ರಲ್ಲಿ ರಣಧೀರ್ ಸಿಂಗ್ ಟ್ರ್ಯಾಪ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಬಳಿಕ, ಕಳೆದ 45 ವರ್ಷಗಳಲ್ಲಿ ಭಾರತಕ್ಕೆ ಈ ವಿಭಾಗದಲ್ಲಿ ಇಲ್ಲಿವರೆಗೆ ಚಿನ್ನದ ಪದಕ ಸಿಕ್ಕಿರಲಿಲ್ಲ. ಅಲ್ಲದೆ, ಏಷ್ಯನ್ ಗೇಮ್ಸ್‌ನ ಟ್ರ್ಯಾಪ್ ಶೂಟಿಂಗ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ನೀರು ಧಾಂಡಾ ಪಾತ್ರರಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಈ ವಿಭಾಗದಲ್ಲಿ ಚೀನಾ ಮತ್ತು ಕುವೈತ್ ದೇಶಗಳ ಏಕಸಾಮಿತ್ವ ಸ್ಥಾಪನೆಯಾಗಿದ್ದು, ಇಂದು ಇದನ್ನು ನೀರು ಧಾಂಡಾ ಮುರಿದುಹಾಕಿದ್ದಾರೆ.
ಅನಾರೋಗ್ಯದ ಕಷ್ಟದ ಸಮಯದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಕೋಚ್ ಮನ್ಶೇರ್ ಸಿಂಗ್, "ನಾಲ್ಕೈದು ದಿನ ತರಬೇತಿ ಪಡೆಯದಿದ್ದರೂ ಏನೂ ಆಗುವುದಿಲ್ಲ. ನೀನು ಅತ್ಯುತ್ತಮ ಆಟಗಾರ್ತಿ, ನಿನಗೆ ಗೆಲುವು ಸಿಕ್ಕೆ ಸಿಗುತ್ತದೆ" ಎಂದು ಪ್ರತಿದಿನ ಕರೆ ಮಾಡಿ ಅವರಲ್ಲಿ ಧೈರ್ಯ ತುಂಬುತ್ತಿದ್ದರಂತೆ. ಜೊತೆಗೆ ಮಧ್ಯಪ್ರದೇಶದ ಮಾಜಿ ಸಚಿವೆ ಯಶೋದರಾ ರಾಜೇ ಅವರ ಬೆಂಬಲವೂ ತಮಗೆ ಸಿಕ್ಕಿತು ಎಂದು ಧಾಂಡಾ ನೆನಪಿಸಿಕೊಳ್ಳುತ್ತಾರೆ.
2018ರ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಸೋದರಸಂಬಂಧಿ, ಶಾಟ್‌ಗನ್ ಶೂಟರ್ ಲಕ್ಷ್ಯ ಶಿಯೋರಾನ್ ಬೆಳ್ಳಿ ಗೆದ್ದಿದ್ದನ್ನು ನೋಡಿ ಶೂಟಿಂಗ್ ಕ್ರೀಡೆಗೆ ಬಂದ ಧಾಂಡಾ, ಇಂದು ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಭೋಪಾಲ್‌ನ ಶೂಟಿಂಗ್ ಅಕಾಡೆಮಿಯಲ್ಲಿ ಸಿಕ್ಕ ತರಬೇತಿ ಹಾಗೂ ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್ ಹಾಗೂ ವಿಶ್ವಕಪ್‌ನಲ್ಲಿ ಗೆದ್ದ ಚಿನ್ನದ ಅನುಭವ ಈಗ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ ಎನ್ನುತ್ತಾರೆ ನೀರು ಧಾಂಡಾ, (ಏಜೆನ್ಸೀಸ್).