

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2019-20ರಿಂದ 2022-23ರ ವರೆಗೆ ನಡೆದಿರುವ ಯೋಜನೆಗಳ ಕಾಮಗಾರಿಗಳಲ್ಲಿ ಆಗಿದೆ ಎನ್ನಲಾದ ಅಕ್ರಮಗಳ ಕುರಿತಾದ ದೂರಿನ ಸಂಬಂಧ ವಿವರ ತನಿಖೆ ನಡೆಸಲು ತನಿಖಾ ಸಮಿತಿಯನ್ನು ಸರ್ಕಾರ ರಚಿಸಿದೆ.
ನಾಲ್ಕು ಪ್ರತ್ಯೇಕ ಸಮಿತಿ ರಚಿಸಿದ್ದು, ಒಂದೊಂದು ಜವಾಬ್ದಾರಿ ನೀಡಲಾಗಿದೆ. ಅಷ್ಟೇ ಅಲ್ಲದೇ ಸಮಿತಿಗೆ ಕಳಂಕ ರಹಿತ ಐಎಎಸ್ ಅಧಿಕಾರಿಗಳನ್ನು ನೇಮಿಸಿರುವುದು ವಿಶೇಷವಾಗಿದೆ.
ಘನತ್ಯಾಜ್ಯ ನಿರ್ವಹಣೆಗೆ ಕಾಮಗಾರಿಗಳ ತನಿಖಾ ಸಮಿತಿಗೆ ಉಜ್ವಲ್ ಕುಮಾರ್ ಘೋಷ್ ಅಧ್ಯಕ್ಷರಾಗಿದ್ದು, ಅವರೊಂದಿಗೆ ಲೋಕೋಪಯೋಗಿ ಇಲಾಖೆಯ ಇಬ್ಬರು ಮುಖ್ಯ ಅಭಿಯಂತರರು ಒಬ್ಬರು ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರರಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಓಎಫ್ ಸಿ ಕೇಬಲ್‌ಗೆ ಅನುಮತಿ ನೀಡಿರುವ ಬಗ್ಗೆ ತನಿಖೆ ನಡೆಸಲು ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ಜವಾಬ್ದಾರಿ ನೀಡಿದ್ದು, ಲೋಕೋಪಯೋಪಯೋಗಿ ಇಲಾಖೆಯ ನಾಲ್ಕು ಇಂಜಿನಿಯರ್‌ಗಳು, ಒಬ್ಬರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿದ್ದಾರೆ.
ಬೃಹತ್ ನೀರುಗಾಲುವೆ ಕಾಮಗಾರಿಗಳು ಹಾಗೂ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ ನೀಡಿರುವ ವಿಷಯದಲ್ಲಿ ತನಿಖೆ ಮಾಡಲು ಪಿ.ಸಿ.ಜಾಫರ್ ಅವರ ತಂಡ ರಚಿಸಲಾಗಿದೆ. ಇದರಲ್ಲಿ ಸಹ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿದ್ದಾರೆ.
ಇನ್ನೊಂದು ತನಿಖಾ ಸಮಿತಿ ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ, ವಾರ್ಡ್ ಕಾಮಗಾರಿ ಬಗ್ಗೆ ಪರಿಶೀಲನೆ ಮಾಡಲಿದ್ದು, ಆರ್.ವಿಶಾಲ್ ಅಧ್ಯಕ್ಷರಾಗಿದ್ದಾರೆ.
- ತನಿಖೆ ಉದ್ದೇಶ
ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್ ಪಾವತಿಸಿರುವುದು, ಟೆಂಡರ್ ನೀಡುವಲ್ಲಿ ಕೆಟಿಟಿಪಿ ನಿಯಮ ಉಲ್ಲಂಸಿರುವುದು, ಹೆಚ್ಚಿನ ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡದಿರುವುದು ಹಾಗೂ ಅನುಮೋದಿತ ಕಾಮಗಾರಿಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸದಿರುವ ಕುರಿತು ದೂರುಗಳಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಬಿಬಿಎಂಪಿ ಅನುದಾನದಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವ ಅವಶ್ಯಕತೆ ಇದೆ. ಹೀಗಾಗಿ, ಆಯಾ ವಿಷಯ ವ್ಯಾಪ್ತಿಗೆ ಪ್ರತ್ಯೇಕ ತಜ್ಞರ ತನಿಖಾ ಸಮಿತಿ ರಚಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
- ಸಹಜ ನ್ಯಾಯ ತತ್ವ
ಈ ಪ್ರಕಾರ 2019-20ರಿಂದ 2022-23ರ ವರೆಗೆ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ ಕಾಮಗಾರಿ, ರಸ್ತೆ ಅಭಿವೃದ್ಧಿ ಕಾಮಗಾರಿ, ಓಎ್ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿ, ಕೇಂದ್ರ/ ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿಗಳು, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿನ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತಾದ ದೂರು ಪ್ರಕರಣಗಳನ್ನು ಸಹಜ ನ್ಯಾಯ ತತ್ವದ ಅಡಿಯಲ್ಲಿ ಗಂಭೀರ ಪ್ರಕರಣವೆಂದು ಪರಿಗಣಿಸಿ ಬಾಹ್ಯ ಮೂಲದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆಯಾ ವಿಷಯ ವ್ಯಾಪ್ತಿಗೊಳಪಟ್ಟಂತೆ ಪರಿಣಿತರು/ ತಜ್ಞರನ್ನೊಳಗೊಂಡ ತನಿಖಾ ಸಮಿತಿ ರಚಿಸಿ ಸ್ವತಂತ್ರ ವಿಚಾರಣೆ ನಡೆಸುವುದೆಂದು ಸಮಂಜಸವೆಂಬ ಅಭಿಪ್ರಾಯಗಳೊಂದಿಗೆ ಆದೇಶ ಹೊರಡಿಸಲಾಗಿದೆ.
- ಪರಿಶೀಲನೆ ಏನೇನು?
ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಿಗೆ ಅಗತ್ಯ ಶಾಸನಬದ್ಧ ಅನುಮತಿ ಪಡೆದಿರುವ ಬಗ್ಗೆ, ಕೆಪಿಟಿಪಿ ಕಾಯ್ದೆಯ ಪಾಲನೆ, ಸರ್ಕಾರದ ಅನುಮೋದನೆ ಪಡೆದಿರುವ ಬಗ್ಗೆ, ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾವಳಿ ತಿರುಚಿರುವುದು, ಸಡಿಲಗೊಳಿಸಿದ್ದಲ್ಲಿ ಮೌಲ್ಯಮಾಪನ ದುರ್ವ್ಯವಹಾರ, ಅನರ್ಹರಿಗೆ ಟೆಂಡರ್ ನೀಡಿರುವುದು, ಗುತ್ತಿಗೆದಾರರ ವಾರ್ಷಿಕ ವಹಿವಾಟು ದಾಖಲೆ, ನಿರ್ದಿಷ್ಟ ಗುತ್ತಿಗೆದಾರನಿಗೆ ಕಾರ್ಯಾದೇಶ ನೀಡಿ, ಅದೇ ಕಾಮಗಾರಿ ಹಣವನ್ನು ಬೇರೆಯವರಿಗೆ ನೀಡಿರುವುದು, ಅಗಾಧ ವೆಚ್ಚದ ಕಾಮಗಾರಿಗಳಲ್ಲಿ ಅನಗತ್ಯ ವೆಚ್ಚ ಹೆಚ್ಚಳ, ಅನಗತ್ಯ ಕಾಮಗಾರಿ, ಅನುಮೋದನೆಗೊಂಡ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸದೇ ಇರುವುದು, ಪಾಲಿಕೆಗೆ ನಷ್ಟ ಉಂಟಾಗಿರುವ ಪ್ರಕರಣ, ಪಾಲಿಕೆ ಅನುಮತಿ ಪಡೆಯದೇ ಓಎ್ಸಿ ಅಳವಡಿಕೆ, ರಸ್ತೆ ಅಗೆತಕ್ಕೆ ಅನುಮತಿ ಪಡೆಯುವಾಗ ಕಡಿಮೆ ಅಳತೆಗೆ ಅನುಮತಿ ಪಡೆದಿದ್ದು, ಅನುಷ್ಠಾನಗೊಳಿಸಲಾದ ಕಾಮಗಾರಿಯ ಗುಣಮಟ್ಟ ಪರಿಶೀಲನೆಗೊಳಿಸಬೇಕೆಂದು ಸೂಚಿಸಲಾಗಿದೆ.