ಐದನೇ ಮದುವೆಗೆ ಗಾಳ ಬೀಸುತ್ತಿದ್ದಾಳೆ ಸುಂದರಿ: ಹುಷಾರ್‌!

lady
Published on

ತಿರುಪತಿ: ಆಂಧ್ರಪ್ರದೇಶದ ತಿರುಪತಿಯ ಈ ಸುಂದರಿಗೆ ಮದುವೆಯೇ ಬಂಡವಾಳ. ಮದುವೆಯಾಗುವುದು, ಅವರು ಸರಿಯಿಲ್ಲ ಎಂದು ವಿಚ್ಛೇದನ ಪಡೆಯುವುದು ಇಲ್ಲವೇ ಅವರನ್ನು ದೂರ ಮಾಡುವುದು... ಈ ಮೂಲಕ ಲಕ್ಷ ಲಕ್ಷ ರೂಪಾಯಿ ಹಣ ಕೀಳುವುದೇ ಈಕೆಯ ಕಾಯಕ.

ಈಗಾಗಲೇ ನಾಲ್ಕು ಮದುವೆಯಾಗಿ ನಾಲ್ವರಿಗೂ ನಾಮ ಹಾಕಿರುವ ಈ ತಿರುಪತಿ ಸುಂದರಿಯ ಹೆಸರು ಸ್ವಪ್ನಾ. ಇದೀಗ ಐದನೆಯವನಿಗೆ ಗಾಳ ಹಾಕುತ್ತಿದ್ದಾಗ ಆಂಧ್ರ ಪ್ರದೇಶದ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಮೊದಲು ಈಕೆ ಬಲೆ ಬೀಸಿದ್ದು ತನ್ನ ಸ್ವಂತ ಶ್ರೀಮಂತ ಚಿಕ್ಕಪ್ಪನನ್ನೇ. ಆತನನ್ನು ಮದುವೆಯಾಗಿದ್ದ ಸ್ವಪ್ನಾ ಅವನಿಂದ ಸಾಕಷ್ಟು ಹಣ ಕಿತ್ತುಕೊಂಡ ಮೇಲೆ ತನಗೆ ಆತ ಯಾವುದೇ ಸುಖ ಕೊಡುತ್ತಿಲ್ಲ, ದೈಹಿಕವಾಗಿ ಆತ ಸರಿಯಾಗಿಲ್ಲ ಎಂದು ದೂರಿ ಆತನಿಂದ ವಿಚ್ಛೇದನ ಪಡೆದುಕೊಂಡಳು.

ನಂತರ ಸ್ವಪ್ನಾ ಪೃಥ್ವಿರಾಜ್‌ ಎಂಬುವವನಿಗೆ ಗಾಳ ಹಾಕಿದಳು. ಒಂದಷ್ಟು ದಿನ ಅವನ ಜತೆ ಸಂಸಾರ ಮಾಡಿ ನಂತರ ಆತ ಸರಿಯಿಲ್ಲ, ಅವನ ಕ್ಯಾರೆಕ್ಟರ್‌ ಸರಿಯಿಲ್ಲ ಎಂದು ದೂರಿ ಕೋರ್ಟ್ ಮೊರೆ ಹೋಗಿದ್ದಾಳೆ. ಅವನಿಂದ 25 ಲಕ್ಷ ರೂಪಾಯಿ ಪರಿಹಾರ ಪಡೆದು ಮೂರನೆಯ ಗಂಡನಿಗಾಗಿ ಬಲೆ ಬೀಸಿದ್ದಾಳೆ.

ಮ್ಯಾಟ್ರಿಮೋನಿ ಸೈಟ್ ಮೂಲಕ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್ ಎಂಬುವವರ ಪರಿಚಯ ಮಾಡಿಕೊಂಡ ಈಕೆ ಮದುವೆಯಾಗಿದ್ದಾಳೆ. ಈಕೆಗೆ ಹಿನ್ನೆಲೆ ಮುನ್ನಲೆ ಏನೂ ಕೇಳದ ಅತ ಸೌಂದರ್ಯ ನೋಡಿ ಮರಳಾಗಿದ್ದಾನೆ. ನಂತರ ಈತ ಕಿರುಕುಳ ನೀಡುತ್ತಿದ್ದಾನೆ, ದೌರ್ಜನ್ಯ ನೀಡುತ್ತಿದ್ದಾನೆ ಎಂದು ದೂರಿ ಆತನಿಂದ ಐದು ಲಕ್ಷ ರೂಪಾಯಿ ಪರಿಹಾರ ಪಡೆದುಕೊಂಡಿದ್ದಾಳೆ.

ಆಗ ಈ ಪತಿಯ ವಿರುದ್ಧ ಸ್ವಪ್ನಾ ಪೊಲೀಸರಿಗೆ ದೂರು ಕೊಡುತ್ತಾಳೆ. ಆಕೆಯ ಹಿಸ್ಟರಿ ತೆಗೆದಾಗ ಪೊಲೀಸರಿಗೆ ಅವಳ ನಿಜ ಸ್ವರೂಪ ಗೊತ್ತಾಗುತ್ತದೆ. ತನಿಖೆ ನಡೆಸಿದಾಗ ಸ್ವಪ್ನಾ ಬೇರೆ ಬೇರೆ ಹೆಸರುಗಳಲ್ಲಿ ಬೇರೆ ಬೇರೆ ಪ್ರೊಫೈಲ್‌ಗಳನ್ನು ಮಾಡಿಕೊಂಡು ಮದುವೆಯ ಗಾಳ ಬೀಸುತ್ತಿರುವುದು ತಿಳಿದುಬಂದು ಆಕೆಯನ್ನು ಈಗ ಅರೆಸ್ಟ್‌ ಮಾಡಲಾಗಿದೆ. ಐದನೆಯ ಗಂಡನಿಗಾಗಿ ಹುಡುಕಾಟ ನಡೆಸುತ್ತಿದ್ದ ಸ್ವಪ್ನಾ ಸದ್ಯ ಜೈಲಿನಲ್ಲಿ ಇದ್ದಾಳೆ.

ಬಿಡುಗಡೆಯಾದ ನಂತರ ಮತ್ತೆ ಗಾಳ ಬೀಸಿಯಾಳು, ಹುಷಾರ್‌!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net