

ಬೆಂಗಳೂರು: ಗಡಿ ರಕ್ಷಣೆಗೆ ತೆರಳುತ್ತಿದ್ದ ರಾಜ್ಯದ ನಾಲ್ವರು ಯೋಧರು ಪ್ರತ್ಯೇಕ ಅಪಘಾತಗಳಲ್ಲಿ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದ ಪೂಂಛ್ನಲ್ಲಿ ಮಂಗಳವಾರ ಸೇನಾ ವಾಹನ ಕಮರಿಗೆ ಉರುಳಿ ಐವರು ಸೈನಿಕರು ಮೃತಪಟ್ಟಿದ್ದರು. ಇವರಲ್ಲಿ ಮೂವರು ಕರ್ನಾಟಕದವರು. ಇನ್ನೊಂದೆಡೆ ಮಣಿಪುರದ ಬಂಬಲಾದಲ್ಲಿ ಸಂಭವಿಸಿದ ಅವಘಡದಲ್ಲಿ ರಾಜ್ಯದ ಮತ್ತೋರ್ವ ಯೋಧ ಪ್ರಾಣಾರ್ಪಣೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಯೋಧ ಮಹೇಶ್ ಮರಿಗೊಂಡ (25), ಉಡುಪಿ ಜಿಲ್ಲೆ ಕುಂದಾಪುರ ತಾ. ಬೀಜಾಡಿಯ ಅನೂಪ್ ಪೂಜಾರಿ(31) ಹಾಗೂ ಬೆಳಗಾವಿ ತಾಲೂಕಿನ ಪಂತನಗರದ ದಯಾನಂದ ತಿರಕನ್ನವರ (44) ಹಾಗೂ ಮಣಿಪುರದಲ್ಲಿ ಚಿಕ್ಕೋಡಿ ತಾಲೂಕಿನ ಕುಪ್ಪಾಣವಾಡಿಯ ಸುಬೇದಾರ ಧರ್ಮರಾಜ ಸುಭಾಷ ಖೋತ (43) ಮೃತಪಟ್ಟಿದ್ದಾರೆ.
11ನೇ ಮರಾಠಾ ಲಘು ಪದಾತಿದಳದ ಯೋಧರು ಮಂಗಳವಾರ ಪೂಂಛ್ನ ನೀಲಂನಲ್ಲಿರುವ ಸೇನಾ ನೆಲೆಯಿಂದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿಯ ಬಾಲ್ನೋಯಿ ಘೋರಾ ಪ್ರದೇಶಕ್ಕೆ ಕರ್ತವ್ಯ ನಿರ್ವಹಿಸಲು ತೆರಳುತ್ತಿದ್ದರು. ಕಡಿದಾದ ಹಾಗೂ ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ್ದ ವಾಹನ 150 ಅಡಿ ಆಳದ ಕಮರಿಗೆ ಬಿದ್ದಿತ್ತು. ದುರ್ಘಟನೆಯಲ್ಲಿ ಐವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಯೋಧರ ಪಾರ್ಥಿವ ಶರೀರಗಳನ್ನು ರಾಜ್ಯಕ್ಕೆ ತರಲಾಗುತ್ತಿದೆ.
ಘಾಟ್ನಿಂದ ಕೆಳಗಿಳಿಯುತ್ತಿದ್ದ ವಾಹನದಲ್ಲಿದ್ದ ಏಳು ಸೈನಿಕರ ಪೈಕಿ ಚಾಲಕ ಸೇರಿ ಇಬ್ಬರು ಹುತಾತ್ಮರಾಗಿದ್ದು, ಐದು ಸೈನಿಕರ ಸ್ಥಿತಿ ಚಿಂತಾಜನಕವಾಗಿದೆ. ಧರ್ಮರಾಜ ಹುತಾತ್ಮರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಸೇನೆಯಲ್ಲಿ 23 ವರ್ಷದಿಂದ ಸೇವೆಯಲ್ಲಿದ್ದ ಖೋತ ಅವರಿಗೆ ಆರು ತಿಂಗಳಷ್ಟೇ ಸೇವಾವಧಿ ಉಳಿದಿತ್ತು. ಅಗರ್ತಲಾದ 305 ಮೀಡಿಯಂ ರೆಜಿಮೆಂಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹುತಾತ್ಮ ಯೋಧ ತಂದೆ, ತಾಯಿ, ಮಕ್ಕಳನ್ನು ಅಗಲಿದ್ದಾರೆ.
ಖೋತ ಪಾರ್ಥಿವ ಶರೀರ ಮಣಿಪುರದಿಂದ ವಿಶೇಷ ವಿಮಾನದ ಮೂಲಕ ಗೋವಾಕ್ಕೆ ಬರಲಿದ್ದು, ಅಲ್ಲಿಂದ ಗುರುವಾರ ರಾತ್ರಿ 2 ಗಂಟೆಗೆ ಬೆಳಗಾವಿಗೆ ತರಲಾಗುತ್ತದೆ. ಶುಕ್ರವಾರ ಬೆಳಗ್ಗೆ ಕುಪ್ಪಾಣವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಪತ್ನಿಯನ್ನು ಊರಿಗೆ ಕಳಿಸಿದ ಬೆನ್ನಲ್ಲೇ ಸಾವಿನ ಮನೆಗೆ..: ರಬಕವಿ- ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಯೋಧ ಮಹೇಶ ಮರಿಗೊಂಡ ಅವರಿಗೆ 3 ವರ್ಷಗಳ ಹಿಂದಷ್ಟೆ ಲಕ್ಷ್ಮೀ ಎಂಬುವರ ಜತೆ ಮದುವೆ ಆಗಿತ್ತು. ಕಳೆದ ಆಗಸ್ಟ್ನಲ್ಲಿ ಮನೆಗೆ ರಜೆಗೆ ಬಂದಿದ್ದ ಮಹೇಶ್, ಆಗ ಹಿಮಾಚಲಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದರಿಂದ ಪತ್ನಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಇತ್ತೀಚೆಗೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿದ್ದರಿಂದ ಪತ್ನಿಯನ್ನು ವಾಪಸ್ ಊರಿಗೆ ಕಳುಹಿಸಿ ಕರ್ತವ್ಯಕ್ಕೆ ತೆರಳಿದ್ದರು. ಇವರು ಸೇನೆಗೆ ಸೇರಿ ಆರೂವರೆ ವರ್ಷವಾಗಿತ್ತು. ಮಂಗಳವಾರ ಬೆಳಗ್ಗೆ ಪತ್ನಿ ಲಕ್ಷ್ಮೀ ಊರಿಗೆ ಬಂದಿದ್ದು, ಅದೇ ರಾತ್ರಿ ನಡೆದ ಅಪಘಾತದಲ್ಲಿ ಯೋಧ ಮಹೇಶ್ ಸಾವನ್ನಪ್ಪಿದ್ದಾರೆ. ಮೃತ ಯೋಧನಿಗೆ ತಾಯಿ, ಸಹೋದರ, ಸಹೋದರಿ ಇದ್ದಾರೆ.
ಸೇನೆಯಲ್ಲಿ ಮಹೇಶ್ ಜತೆ ಸೇವೆಯಲ್ಲಿದ್ದ ಅಥಣಿಯ ಯೋಧರೊಬ್ಬರು ಬುಧವಾರ ಬೆಳಗ್ಗೆ ಮಹಾಲಿಂಗಪುರಕ್ಕೆ ಬಂದು ದುರಂತದ ಮಾಹಿತಿ ನೀಡಿದ್ದಾರೆ ಎಂದು ಯೋಧನ ಚಿಕ್ಕಪ್ಪ ಮಹಾಲಿಂಗಪ್ಪ ಮರಿಗೊಂಡ ವಿಜಯವಾಣಿಗೆ ತಿಳಿಸಿದರು. ಮೃತ ಯೋಧನ ಪಾರ್ಥಿವ ಶರೀರ ಬೆಳಗಾವಿಗೆ ಬಂದಿದ್ದು, ಗುರುವಾರ ಮಹಾಲಿಂಗಪುರದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ.
ಬೆಳಗಾವಿಯ ಇಬ್ಬರು ಯೋಧರ ಸಾವು: ಸುದೀರ್ಘ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪಂತನಗರದ ಯೋಧ ದಯಾನಂದ ತಿರಕನ್ನವರ (44) ಸುಬೇದಾರ್ ಆಗಿದ್ದರು. ಅವರಿಗೆ ವರ್ಷಗಳ ಸೇವಾವಧಿಯಷ್ಟೇ ಉಳಿದಿತ್ತು. ದಯಾನಂದ ದೇಶದ ವಿವಿಧ ಭಾಗಗಳಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ್ದಾರೆ. ಗುರುವಾರ ಗ್ರಾಮಕ್ಕೆ ಪಾರ್ಥಿವ ಶರೀರ ತರಲಾಗುತ್ತಿದೆ. ಮೃತರಿಗೆ ತಂದೆ-ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.
ಮಣಿಪುರದಲ್ಲಿ ಯೋಧ ಸಾವು: ಚಿಕ್ಕೋಡಿ ತಾ. ಕುಪ್ಪಾಣವಾಡಿಯ ಸುಬೇದಾರ ಧರ್ಮರಾಜ ಸುಭಾಷ ಖೋತ(43) ಡಿ.23 ರಂದು ಮಣಿಪುರದ ಬಂಬಲಾದಲ್ಲಿ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಘಾಟ್ನಿಂದ ಕೆಳಗಿಳಿಯುತ್ತಿದ್ದ ವಾಹನದಲ್ಲಿದ್ದ ಏಳು ಸೈನಿಕರ ಪೈಕಿ ಚಾಲಕ ಸೇರಿ ಇಬ್ಬರು ಹುತಾತ್ಮರಾಗಿದ್ದು, ಐದು ಸೈನಿಕರ ಸ್ಥಿತಿ ಚಿಂತಾಜನಕವಾಗಿದೆ. ಧರ್ಮರಾಜ ಹುತಾತ್ಮರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಸೇನೆಯಲ್ಲಿ 23 ವರ್ಷದಿಂದ ಸೇವೆಯಲ್ಲಿದ್ದ ಖೋತ ಅವರಿಗೆ ಆರು ತಿಂಗಳಷ್ಟೇ ಸೇವಾವಧಿ ಉಳಿದಿತ್ತು. ಅಗರ್ತಲಾದ 305 ಮೀಡಿಯಂ ರೆಜಿಮೆಂಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹುತಾತ್ಮ ಯೋಧ ತಂದೆ, ತಾಯಿ, ಮಕ್ಕಳನ್ನು ಅಗಲಿದ್ದಾರೆ. ಖೋತ ಪಾರ್ಥಿವ ಶರೀರ ಮಣಿಪುರದಿಂದ ವಿಶೇಷ ವಿಮಾನದ ಮೂಲಕ ಗೋವಾಕ್ಕೆ ಬರಲಿದ್ದು, ಅಲ್ಲಿಂದ ಗುರುವಾರ ರಾತ್ರಿ 2 ಗಂಟೆಗೆ ಬೆಳಗಾವಿಗೆ ತರಲಾಗುತ್ತದೆ. ಶುಕ್ರವಾರ ಬೆಳಗ್ಗೆ ಕುಪ್ಪಾಣವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ವಾರದ ಹಿಂದಷ್ಟೇ ಊರಿಗೆ ಬಂದಿದ್ದ: ಬೀಜಾಡಿಯ ಚಂದು ಪೂಜಾರ್ತಿ ಮತ್ತು ನಾರಾಯಣ ಪೂಜಾರಿ ದಂಪತಿ ಪುತ್ರ ಅನೂಪ್ ಪೂಜಾರಿ (31) ಸೇನೆಗೆ ಸೇರಿ 13 ವರ್ಷವಾಗಿತ್ತು. ತಾಯಿ, ಪತ್ನಿ, 2 ವರ್ಷದ ಪುತ್ರಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕಳೆದ ತಿಂಗಳು ರಜೆಯಲ್ಲಿ ಊರಿಗೆ ಬಂದಿದ್ದ ಅವರು, ಡಿ.15ರಂದು ಕೋಟೇಶ್ವರ ಕೊಡಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಮಗಳ ಹುಟ್ಟುಹಬ್ಬ ಆಚರಿಸಿದ್ದರು. 3 ತಿಂಗಳು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ಗುಜರಾತ್ನಲ್ಲಿ ಸೇವೆಗೆ ನಿಯುಕ್ತಿಗೊಳ್ಳಲಿದ್ದರು. ಗುರುವಾರ ತೆಕ್ಕಟ್ಟೆಯಿಂದ ಪಾರ್ಥಿವ ಶರೀರವನ್ನು ಕೋಟೇಶ್ವರ ಮೂಲಕ ಮೆರವಣಿಗೆಯಲ್ಲಿ ತಂದು ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.
ಮರಣ ಸುದ್ದಿ ತಂದ ಗೆಳೆಯ: ಅನೂಪ್ ಜತೆ ಸೇವೆಯಲ್ಲಿದ್ದು, ಸದ್ಯ ರಜೆಯಲ್ಲಿ ಚಿಕ್ಕೋಡಿಗೆ ಬಂದಿದ್ದ ಯೋಧ ಆಂಜನೇಯ ಪಾಟೀಲ್ ಸಹೋದರನೊಂದಿಗೆ ತಡರಾತ್ರಿ ಹೊರಟು ಬೆಳಗ್ಗೆ ಬೀಜಾಡಿಗೆ ಬಂದು ಅನೂಪ್ ಪೂಜಾರಿ ಮನೆಗೆ ಮಾಹಿತಿ ನೀಡಿದರು.
ಮಿಲಿಟರಿಗೆ ಹೋಗಬೇಕು ಎಂಬುದು ಅವನ ಕನಸಾಗಿತ್ತು. ದೇಶಸೇವೆಗಾಗಿ ಸೇನೆ ಸೇರಿದ. ನಮ್ಮ ಮದುವೆ ಮಾಡಿಸಿ ಸಾಲ ತೀರಿಸಿದ್ದಾನೆ. ವಾರದ ಹಿಂದೆ ಕುಂದಾಪುರದ ಕೊಡಿ ಹಬ್ಬಕ್ಕೆ ಬಂದಿದ್ದ. ಇವತ್ತು ನಮ್ಮನೆಲ್ಲ ಬಿಟ್ಟೇ ಹೋದ. ದೇಶಕ್ಕಾಗಿ ಸೇವೆ ಮಾಡಿ ಪ್ರಾಣತ್ಯಾಗ ಮಾಡಿದ ತಮ್ಮನ ಬಗ್ಗೆ ಹೆಮ್ಮೆ ಇದೆ.
| ವೀಣಾ, ಅನೂಪ್ ಸಹೋದರಿ
ದೇವರು ನನಗೆ ಮೋಸ ಮಾಡಿದ, ಇದ್ದ ಒಬ್ಬ ಪುತ್ರನನ್ನು ಕಳೆದುಕೊಂಡೆ. ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿಸಿ, ಜಾಗ ಖರೀದಿ ಮಾಡಿದ್ದ ಮಗ ಊರಿಗೆ ಬಂದು ಡಿ.20ಕ್ಕೆ ಮರಳಿದ್ದ. ದೇಶ ಸೇವೆ ಮಾಡಿದ ನನ್ನ ಮಗನನ್ನು ದೇವರು ಕಸಿದುಕೊಂಡಿದ್ದಾನೆ.
| ಚಂದು ಪೂಜಾರ್ತಿ ಅನೂಪ್ ತಾಯಿ