ಚಾಲಕನ ಅಪಹರಿಸಿ ಹಲ್ಲೆ ನಡೆಸಿದ್ದ ರೌಡಿಶೀಟರ್ ಸೇರಿ ನಾಲ್ವರ ಸೆರೆ

arrested
Published on

ಬೆಂಗಳೂರು: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಚಾಲಕನನ್ನು ಅಪಹರಿಸಿ ಹಲ್ಲೆ ನಡೆಸಿದ್ದ ರೌಡಿಶೀಟರ್ ಸೇರಿ ನಾಲ್ವರು ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಲಘಟ್ಟಪುರ ಠಾಣೆ ರೌಡಿಶೀಟರ್ ಮಂಜೇಶ್ ಅಲಿಯಾಸ್ ಅವಲಹಳ್ಳಿ ಮಂಜ, ಆತನ ಸಹಚರರಾದ ದಿಲೀಪ್, ಚಂದ್ರಶೇಖರ್ ಮತ್ತು ನೂತನ್‌ನನ್ನು ಬಂಧಿಸಲಾಗಿದೆ.

ಆರೋಪಿಗಳು ಏ.೮ರಂದು ಮಿನಿ ಬಸ್ ಚಾಲಕ ಕಿರಣ್ ಎಂಬಾತನನ್ನು ಬಸ್ ಸಮೇತ ಅಪಹರಿಸಿ ಹಲ್ಲೆ ನಡೆಸಿ ಸಾವಿರಾರು ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸದ ನೆಪದಲ್ಲಿ ಕರೆಸಿಕೊಂಡು ಹಲ್ಲೆ:

ಅಪಹರಣಕ್ಕೊಳಗಾಗಿದ್ದ ಕಿರಣ್ ಈ ಹಿಂದೆ ಮಂಜೇಶ್ ಪತ್ನಿಯ ತವರು ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆಗಿನಿಂದ ಕಿರಣ್ ಮತ್ತು ಮಂಜೇಶ್ ಪತ್ನಿ ಪರಿಚಯಸ್ಥರಾಗಿದ್ದು, ಆತ್ಮೀಯತೆ ಇತ್ತು ಎನ್ನಲಾಗಿದೆ. ಬಳಿಕ ಕಿರಣ್ ಕೆಲಸ ಬಿಟ್ಟು ಸ್ವಂತ ಮಿನಿ ಬಸ್ ಖರೀದಿಸಿ ಪ್ರವಾಸಿ ತಾಣಗಳಿಗೆ ಬಾಡಿಗೆಗೆ ಹೋಗುತ್ತಿದ್ದ. ಈ ಮಧ್ಯೆ ೨೦೨೩ರಲ್ಲಿ ಮಂಜೇಶ್ ಪತ್ನಿ ಕಿರಣ್‌ನಿಂದ ೪೦ ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಅದನ್ನು ಹಂತ-ಹಂತವಾಗಿ ತೀರಿಸುತ್ತಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಪತ್ನಿ ಜತೆ ಕಿರಣ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ಮಂಜೇಶ್, ಏ.೮ರಂದು ಮಹಿಳೆಯೊಬ್ಬರ ಮೂಲಕ ಕರೆ ಮಾಡಿಸಿ ಕೋಟಿ ಲಿಂಗೇಶ್ವರಕ್ಕೆ ಹೋಗಬೇಕಿದ್ದು, ಬಾಡಿಗೆಗೆ ಬಸ್ ಬೇಕೆಂದು ಕರೆ ಮಾಡಿಸಿದ್ದ. ಅದರಂತೆ ಏ.೯ರಂದು ಕಿರಣ್ ಬಸ್ ಸಮೇತ ಹೋಗಿದ್ದಾನೆ. ಆಗ ಆರೋಪಿಗಳು ಆತನನ್ನು ಕೋಟಿ ಲಿಂಗೇಶ್ವರಕ್ಕೆ ಬೇಡ, ಶಿವಗಂಗೆ ಕಡೆ ಹೋಗೋಣ ಎಂದು ಕರೆದೊಯ್ದಿದ್ದರು. ಮಾರ್ಗ ಮಧ್ಯೆ ಆತನ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಅರಸೀಕೆರೆ, ಹಿರಿಯೂರು, ನೆಲಮಂಗಲ ಕಡೆಗಳಲ್ಲಿ ಸುತ್ತಾಡಿಸಿದ್ದರು. ಬಳಿಕ ಹಾಸನ ರಸ್ತೆಯ ನವಯುಗ ಟೋಲ್ ಗೇಟ್ ಬಳಿ ಕರೆ ತಂದು, ಬಿಟ್ಟು ಕಳುಹಿಸಿದ್ದರು ಎಂದು ಕಿರಣ್ ದೂರಿನಲ್ಲಿ ಆರೋಪಿಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿವಸ್ತ್ರಗೊಳಿಸಿ ಹಲ್ಲೆ:

ಮಂಜೇಶ್ ಮಾರ್ಗ ಮಧ್ಯೆ ಕಿರಣ್‌ನನ್ನು ಹಿಂದಿನ ಸೀಟಿ ಕರೆಸಿಕೊಂಡು ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನನ್ನ ಪತ್ನಿಗೂ ನಿನಗೂ ಏನು ಸಂಬಂಧ? ಯಾಕೆ ಆಕೆ ನಿನ್ನ ಖಾತೆಗೆ ಹಣ ಹಾಕುತ್ತಿದ್ದಾಳೆ? ಎಂದೆಲ್ಲ ಪ್ರಶ್ನಿಸಿ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಆತನಿಂದ ಮದ್ಯ ಹಾಗೂ ಊಟಕ್ಕೆಂದು ೨೫ ಸಾವಿರ ರೂ. ಪಡೆದುಕೊಂಡಿದ್ದಾರೆ. ನಂತರ ಮನೆ ಖಾಲಿ ಮಾಡಿ ಊರಿಗೆ ಹೋಗುವಂತೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ಕಿರಣ್ ದೂರು ನೀಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ:

ಮಾಜಿ ಕಾರ್ಪೋರೇಟರ್ ಸೋಮಣ್ಣನ ಬರ್ತ್ ಡೇ ಪಾರ್ಟಿಗೆ ಹೋಗಿದ್ದವರ ಬಗ್ಗೆ ಮಾಹಿತಿ ಕೊಡು. ನನ್ನ ಕೊಲೆಗೆ ಎಷ್ಟು ಲಕ್ಷ ಸುಫಾರಿ ಹಣ ತೆಗೆದುಕೊಂಡಿದ್ದೀರಾ? ಎಂದು ಬಸ್‌ನಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಕಿರಣ್ ದೂರಿನಲ್ಲಿ ಆರೋಪಿಸಿದ್ದಾನೆ. ಸೋಮಣ್ಣ ಎಂಬುವರ ಅಣ್ಣನ ಮಗ ವಿನೋದ್ ಕೊಲೆ ಪ್ರಕರಣದಲ್ಲಿ ಐದು ವರ್ಷಗಳಿಂದ ಜೈಲಿನಲ್ಲಿದ್ದ ಮಂಜೇಶ್, ಎರಡು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಗೆ ಬರುವಾಗ ಹತ್ತಾರು ಕಾರುಗಳಲ್ಲಿ ನೂರಾರು ಹುಡುಗರನ್ನು ತುಂಬಿಕೊಂಡು ನೈಸ್ ರಸ್ತೆಯಲ್ಲಿ ಶೋ ನಡೆಸಿದ್ದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net