ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ಮಾಡಿದ್ದ ನಾಲ್ವರ ಸೆರೆ

arrest
Published on

ಬೆಂಗಳೂರು: ಶಿವರಾತ್ರಿ ಹಬ್ಬದಂದು ನೃತ್ಯ ಮಾಡುವಾಗ ಕಾಲು ತಾಗಿತೆಂಬ ಕ್ಷುಲ್ಲಕ ಕಾರಣಕ್ಕೆ ಯುವಕನೊಂದಿಗೆ ಜಗಳವಾಡಿ ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹನುಮಂತನಗರದ ನಿವಾಸಿಗಳಾದ ಚೇತನ್, ರಂಗ ಮತ್ತು ಪವನ್ ಬಂಧಿತ ಆರೋಪಿಗಳು.
ಗಿರಿನಗರ ನಿವಾಸಿ ಯೋಗೇಶ್(೨೪) ಕೊಲೆಯಾದವನು.

ಬೈಕ್‌ಗಳ ಸ್ವಚ್ಚಗೊಳಿಸುವ ಕೆಲಸ ಮಾಡಿಕೊಂಡಿರುವ ಯೋಗೇಶ್, ಶುಕ್ರವಾರ ರಾತ್ರಿ ಗಿರಿನಗರ ಬಳಿಯ ಶನಿ ಮಹಾತ್ಮದೇವಸ್ಥಾನದಲ್ಲಿ ನಡೆದ ಶಿವರಾತ್ರಿ ಜಾಗರಣೆ ಪೂಜೆಗೆ ಹೋಗಿದ್ದ. ಈ ವೇಳೆ ಸ್ಥಳೀಯ ಯುವಕರು ನೃತ್ಯ ಮಾಡುತ್ತಿದ್ದರು. ಅವರೊಂದಿಗೆ ಈತ ಕೂಡ ನೃತ್ಯ ಮಾಡುತ್ತಿದ್ದ. ಆ ವೇಳೆ ಆರೋಪಿಯೊಬ್ಬನಿಗೆ ಯೋಗೇಶ್‌ನ ಕಾಲು ತಗುಲಿದೆ. ಇದೇ ಕಾರಣಕ್ಕೆ ಆರೋಪಿಗಳು ಮತ್ತು ಯೋಗೇಶ್ ನಡುವೆ ಜಗಳ ಶುರುವಾಗಿದ್ದು, ಅದು ವಿಕೋಪಕ್ಕೆ ಹೋದಾಗ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಳಿಕ ಸ್ಥಳೀಯರು ಜಗಳ ಬಿಡಿಸಿ ಎಲ್ಲರನ್ನೂ ಸ್ಥಳದಿಂದ ಕಳುಹಿಸಿದ್ದರು.

ಇತ್ತ ಯೋಗೇಶ್, ಬೈಕ್‌ನಲ್ಲಿ ಮನೆ ಕಡೆ ಹೋಗುವಾಗ ಬ್ಯಾಟರಾಯನಪುರ ಬಳಿ ಯೋಗೇಶ್‌ನನ್ನು ಅಡ್ಡಗಟ್ಟಿದ್ದಾರೆ. ನಂತರ ಏಕಾಏಕಿ ಮಾರಕಾಸ್ತ್ರ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಬೈಕ್ ಬಿಟ್ಟು ಯೋಗೇಶ್, ಮನೆಯೊಂದರ ಕಾಂಪೌಂಡ್ ಜಿಗಿದಿದ್ದಾನೆ. ಆದರೂ ಬಿಡದ ಆರೋಪಿಗಳು ಚಾಕುವಿನಿಂದ ಯೋಗೇಶ್‌ನನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net