

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ನಾಲ್ಕು ಮಂದಿಯನ್ನು ಭದ್ರತೆಯ ಕಾರಣಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಬುಧವಾರ ಸ್ಥಳಾಂತರಿಸಲಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಸಂಬಂಧ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ೧೭ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈ ಪೈಕಿ ಪ್ರಕರಣದ ೮ನೇ ಆರೋಪಿ ರವಿಶಂಕರ್, ೧೫ನೇ ಆರೋಪಿ ಕಾರ್ತಿಕ್, ೧೬ನೇ ಆರೋಪಿ ಕೇಶವಮೂರ್ತಿ ಮತ್ತು ೧೭ನೇ ಆರೋಪಿ ನಿಖಿಲ್ ನಾಯಕ್‌ನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ತುಮಕೂರು ಹೊರವಲಯದ ರಂಗಾಪುರದಲ್ಲಿನ ಜೈಲಿಗೆ ಕಳುಹಿಸಲಾಯಿತು.
ಈ ನಾಲ್ಕು ಆರೋಪಿಗಳು ರೇಣುಕಸ್ವಾಮಿಯನ್ನು ತಾವೇ ಕೊಲೆ ಮಾಡಿದ್ದಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಶರಣಾಗಿದ್ದರು. ಅಲ್ಲದೆ, ವಿಚಾರಣೆ ವೇಳೆ ಪೊಲೀಸರಿಗೆ ಕೊಲೆಯ ಸಂಪೂರ್ಣ ಮಾಹಿತಿ ನೀಡಿದ್ದರು. ಆ ನಂತರ ದರ್ಶನ್ ಸೇರಿದಂತೆ ಇತರೆ ಆರೋಪಿಗಳ ಬಂಧನವಾಗಿತ್ತು. ಈ ಎಲ್ಲಾ ಆರೋಪಿಗಳು ಒಂದೇ ಜೈಲಿನಲ್ಲಿದ್ದರೆ ಇತರೆ ಆರೋಪಿಗಳು ಹಾಗೂ ಜೈಲಿನಲ್ಲಿರುವ ದರ್ಶನ್ ಅಭಿಮಾನಿಗಳಾಗಿರುವ ಕೈದಿಗಳು ಈ ನಾಲ್ಕು ಮಂದಿ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯಿದೆ. ಹೀಗಾಗಿ, ಈ ನಾಲ್ವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ್ದ ಬೆಂಗಳೂರಿನ ೨೪ನೇ ಎಸಿಎಂಎಂ ನ್ಯಾಯಾಲಯ, ನಾಲ್ವರು ಆರೋಪಿಗಳ ಸ್ಥಳಾಂತರಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.