

ಕೋಲಾರ: ನಗರದ ಕೀಲುಕೋಟೆ ಬಡಾವಣೆಯಲ್ಲಿರುವ ಸತ್ಯನಾರಾಯಣಸ್ವಾಮಿ ದೇಗುಲದಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾರಂಜಿಕಟ್ಟೆಯ ತರಕಾರಿ ವ್ಯಾಪಾರಿ ಪ್ರಸನ್ನ (33), ಶಬರೀಶ (32), ಶಾಂತಿನಗರದ ಚಾಲಕ ಶಿವಕುಮಾರ್ (37) ಹಾಗೂ ಮತ್ತೊಬ್ಬ ಚಾಲಕ ರಾಜೇಶ್ (32) ಬಂಧಿತರು.
ಆರೋಪಿಗಳಿಂದ 6 ಕೆಜಿ ದೇವರ ಬೆಳ್ಳಿ ಆಭರಣ, ಹುಂಡಿಯಲ್ಲಿದ್ದ 2,020 ರೂ. ನಗದು ಹಾಗೂ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳವು ಮಾಡಿದ್ದ ಹುಂಡಿಯ ಹಣ, ಕಾರಂಜಿ ಕಟ್ಟೆಯಲ್ಲಿ ಕಳವು ಮಾಡಿದ್ದ ದ್ವಿಚಕ್ರ ವಾಹನ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳವು ಮಾಡಿದ್ದ ದ್ವಿಚಕ್ರ ವಾಹನ ಸೇರಿ ಅಂದಾಜು 2 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದೇಗುಲದ ಅರ್ಚಕ ಮಂಜುನಾಥ್ ನೀಡಿದ ದೂರಿನ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದರು. ಡಿ.3ರಂದು ಸತ್ಯನಾರಾಯಣ ದೇಗುಲದ ಬಾಗಿಲು ಕಿತ್ತು ಒಳಗೆ ದೇವರಿಗೆ ಹಾಕಿದ್ದ ಸುಮಾರು 4 ಕೆ.ಜಿ ತೂಕದ ಬೆಳ್ಳಿಯ ಲೇಪನದ ಆಭರಣಗಳನ್ನು ಮತ್ತು ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 10 ಸಾವಿರ ಕಳವು ಮಾಡಿರುವ ಬಗ್ಗೆ ದೂರು ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್, ಎಚ್.ಸಿ.ಜಗದೀಶ್ ತನಿಖಾ ತಂಡದ ಕಾರ್ಯ ವೈಖರಿ ಶ್ಲಾಘಿಸಿದ್ದಾರೆ.