

ಶಿವಮೊಗ್ಗ : ಯುವಜನರ ಸರ್ವತೋಮುಖ ಬೆಳವಣಿಗೆಗೆ ಸಾಂಸ್ಕೃತಿಕ ಚಟುವಟಿಕೆಗಳು ಪೂರಕ. ಯುವ ಸಮೂಹ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಅನೇಕ ವೇದಿಕೆಗಳನ್ನು ಸೃಷ್ಟಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಹೇಳಿದರು. ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನರಲ್ಲಿ ಅನೇಕ ಕೌಶಲವಿದೆ. ಅದನ್ನು ಬಳಸಿಕೊಂಡು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಕಾಲ ಬದಲಾಗಿದೆ. ಕುಟುಂಬ ಸದಸ್ಯರ ಸಂಖ್ಯೆ ಕಡಿಮೆಯಿರುವ ಕಾರಣ ಯುವಜನರ ಮೇಲೆ ಜವಾಬ್ಧಾರಿ ಹೆಚ್ಚಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ ಇಂದು ಹೆಚ್ಚು ಅವಕಾಶ ನೀಡಲಾಗುತ್ತಿದೆ. ಸಾಂಸ್ಕೃತಿಕ ಕಲೆ ಪ್ರೋತ್ಸಾಹಿಸಲು ಸರ್ಕಾರ ಪೂರಕವಾದ ವಾತವರಣ ಸೃಷ್ಟಿಸಿದೆ ಎಂದರು.
ಕಂಪ್ಯೂಟರ್, ಟಿವಿ, ಮೊಬೈಲ್‌ಗಳಲ್ಲಿ ಹೆಚ್ಚು ಕಾಲಕಳೆಯುವುದನ್ನು ಬಿಡಬೇಕು. ಆರೋಗ್ಯಕರವಾದ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಭಾರತದ ಅಮೂಲ್ಯವಾದ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಬೆಳಸುವುದು ಮತ್ತು ಉಳಿಸುವುದು ಯುವ ಸಮೂಹದ ದೊಡ್ಡ ಜವಾಬ್ದಾರಿ ಎಂದು ಹೇಳಿದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ನಮ್ಮ ದೇಶದ ಕಲೆ, ಸಾಹಿತ್ಯ ಮರೆಯಾಗುವ ಸನ್ನಿವೇಶವಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಅವುಗಳನ್ನು ನೆನಪಿಸಿಕೊಳ್ಳುವ ಹಾಗೂ ಅವುಗಳಿಗೆ ಶಕ್ತಿ ತುಂಬುವ ಪ್ರಯತ್ನವಾಗುತ್ತಿರುವುದು ಸಮಾಧಾನಕರ ಸಂಗತಿ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ಯುವಜನತೆ ರಾಷ್ಟ್ರದ ಶಕ್ತಿ. ಸಾಂಸ್ಕೃತಿಕವಾಗಿ ದೇಶವನ್ನು ಬಲಿಷ್ಠಗೊಳಿಸುವ ಕೆಲಸವನ್ನು ಯುವಜನರು ಮಾಡಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕಾ, ನಿಸರ್ಗ ಮಹಿಳಾ ಮಂಡಳಿಯ ಅಧ್ಯಕ್ಷೆ ಭಾರತಿ, ನೆಹರು ಯುವ ಕೇಂದ್ರದ ಅಧಿಕಾರಿ ಕೆಟಿಕೆ ಉಲ್ಲಾಸ್ ಮುಂತಾದವರಿದ್ದರು.